ಪ್ರಧಾನಿಯ ಆರ್ಥಿಕ ಸಲಹಾ ಮಂಡಳಿಗೆ ಸುರ್ಜಿತ್ ಭಲ್ಲಾ ರಾಜೀನಾಮೆ
ಹೊಸದಿಲ್ಲಿ, ಡಿ. 11: ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಅಂಕಣಕಾರ ಸುರ್ಜಿತ್ ಭಲ್ಲಾ ಅವರು ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಮಂಡಳಿಯ ಅರೆ-ಕಾಲಿಕ ಸದಸ್ಯ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಸ್ವತಃ ಭಲ್ಲಾ ಅವರೇ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು ತಾವು ಡಿ. 1ರಂದು ರಾಜೀನಾಮೆ ನೀಡಿದ್ದಾಗಿ ತಿಳಿಸಿದ್ದಾರೆ.
ಭಲ್ಲಾ ಅವರ ರಾಜೀನಾಮೆಯನ್ನು ಪ್ರಧಾನಿ ಅಂಗೀಕರಿಸಿದ್ದಾರೆಂದು ಪ್ರಧಾನಿ ಕಾರ್ಯಾಲಯದ ವಕ್ತಾರರು ತಿಳಿಸಿದ್ದಾರೆ. ''ಅವರು ತಾವು ಬೇರೊಂದು ಸಂಘಟನೆ ಸೇರುವುದಾಗಿ ತಿಳಿಸಿದ್ದಾರೆ'' ಎಂದೂ ವಕ್ತಾರರು ಹೇಳಿದ್ದಾರೆ.
ಆರ್ಥಿಕತೆ ಹಾಗೂ ಸಂಬಂಧಿತ ವಿಚಾರಗಳ ಬಗ್ಗೆ ಸರಕಾರಕ್ಕೆ, ಮುಖ್ಯವಾಗಿ ಪ್ರಧಾನಮಂತ್ರಿಗೆ ಸಲಹೆಗಳನ್ನು ನೀಡುವ ಕೆಲಸವನ್ನು ಸ್ವತಂತ್ರ ಸಂಸ್ಥೆಯಾದ ಆರ್ಥಿಕ ಸಲಹಾ ಮಂಡಳಿ ನಿರ್ವಹಿಸುತ್ತದೆ.
ಆರು ಮಂದಿ ಸದಸ್ಯರ ಈ ಮಂಡಳಿಯಲ್ಲಿ ಖ್ಯಾತ ಅರ್ಥಶಾಸ್ತ್ರಜ್ಞರಾದ ಬಿಬೇಕ್ ದೇಬ್ರಾಯ್ (ಅಧ್ಯಕ್ಷ), ರತನ್ ಪಿ ವಾಟಾಲ್ (ಸದಸ್ಯ ಕಾರ್ಯದರ್ಶಿ), ರತಿನ್ ರಾಯ್, ಆಶಿಮಾ ಗೋಯೆಲ್ ಹಾಗೂ ಶಮಿಕಾ ರವಿ (ಅರೆಕಾಲಿಕ ಸದಸ್ಯರು) ಇದ್ದಾರೆ.