ಉಡುಪಿಯಲ್ಲಿ ಗೃಹರಕ್ಷಕ ದಳ ದಿನಾಚರಣೆ

ಉಡುಪಿ, ಡಿ.11: ಉಡುಪಿಯ ಜಿಲ್ಲಾ ಗೃಹರಕ್ಷಕ ದಳ ಕಚೇರಿ ಆವರಣ ದಲ್ಲಿ ಮಂಗಳವಾರ ಗೃಹ ರಕ್ಷಕ ದಳ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಸಂತಕುಮಾರ್ ಭಾಗವಹಿಸಿ ಮಾತನಾಡಿ ಗೃಹರಕ್ಷಕರು ಅಗ್ನಿಶಮನ ಮತ್ತು ಕಾನೂನು ಸುವ್ಯವಸ್ಥೆ ಕರ್ತವ್ಯ ಅಲ್ಲದೇ ಇತರ ಯಾವುದೇ ಇಲಾಖೆಗೆ ನಿಯೋಜಿಸಿದರೂ ಆ ಇಲಾಖೆಯ ಸಂಬಂಧಪಟ್ಟ ಕೆಲಸವನ್ನು ಮಾಡುವಲ್ಲಿ ಸಮರ್ಥರಾಗಿದ್ದಾರೆ. ಸಮಾಜದಲ್ಲಿ ಇವರ ಸೇವೆ ಶ್ಲಾಘನೀಯ ಎಂದು ಪ್ರಶಂಸಿಸಿದರು.
ಜಿಲ್ಲಾ ಗೃಹ ರಕ್ಷಕ ದಳ ಕಮಾಂಡೆಂಟ್ ಡಾ.ಕೆ.ಪ್ರಶಾಂತ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಗೃಹರಕ್ಷಕದಳದ ವಾರ್ಷಿಕ ವರದಿ ಮಂಡಿಸಿದರು. ಕಾರ್ಯಕ್ರಮದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಡೆಪ್ಯೂಟಿ ಕಮಾಂಡೆಂಟ್ ರಮೇಶ್, ಪಡುಬಿದ್ರಿ ಘಟಕಾಧಿಕಾರಿ ನವೀನ್ ಕುಮಾರ್, ಕಾಪು ಘಟಕಾಧಿಕಾರಿ ಲಕ್ಷ್ಮೀನಾರಾಯಣ ರಾವ್, ಬ್ರಹ್ಮಾವರ ಘಟಕದ ಪ್ಲಟೂನ್ ಕಮಾಂಡರ್ ಸ್ಟೀವನ್ ಪ್ರಕಾಶ್ ಇವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಗೃಹರಕ್ಷಕದಳ ಕಚೇರಿಯ ಅಧೀಕ್ಷಕಿ ಕವಿತಾ ಕೆ.ಸಿ ಉಪಸ್ಥಿತರಿದ್ದರು. ಕಾರ್ಕಳ ಘಟಕಾಧಿಕಾರಿ ಪ್ರಭಾಕರ್ ಸುವರ್ಣ ಪ್ರತಿಜ್ಞಾ ವಿಧಿ ಬೋಧಿಸಿದರು. ಸಾಯಿನಾಥ್ ಉದ್ಯಾವರ್ ಕಾರ್ಯಕ್ರಮವನ್ನು ನಿರೂಪಿಸಿದರು.