1984ರ ಸಿಕ್ಖ್ ವಿರೋಧಿ ಗಲಭೆ: ದೋಷಿ ಮನವಿ
ಪ್ರತಿಕ್ರಿಯೆ ನೀಡುವಂತೆ ಪೊಲೀಸರಿಗೆ ದಿಲ್ಲಿ ಹೈಕೋರ್ಟ್ ಸೂಚನೆ
ಹೊಸದಿಲ್ಲಿ, ಡಿ. 11: 1984ರ ಸಿಖ್ ವಿರೋಧಿ ಗಲಭೆ ಪ್ರಕರಣದಲ್ಲಿ ಮರಣ ದಂಡನೆ ವಿಧಿಸಿರುವುದನ್ನು ಪ್ರಶ್ನಿಸಿ ಅಪರಾಧಿ ಯಶ್ಪಾಲ್ ಸಿಂಗ್ ಸಲ್ಲಿಸಿರುವ ಮನವಿಗೆ ಪ್ರತಿಕ್ರಿಯೆ ನೀಡುವಂತೆ ದಿಲ್ಲಿ ಉಚ್ಚ ನ್ಯಾಯಾಲಯ ಮಂಗಳವಾರ ಪೊಲೀಸರಿಗೆ ಸೂಚಿಸಿದೆ. ಇಲ್ಲಿನ ವಿಚಾರಣಾ ನ್ಯಾಯಾಲಯ ಸಿಖ್ ವಿರೋಧಿ ಗಲಭೆ ಪ್ರಕರಣದಲ್ಲಿ ದೋಷಿ ಎಂದು ಪರಿಗಣಿಸಿರುವುದು ಹಾಗೂ ಮರಣದಂಡನೆ ವಿಧಿಸಿ ತೀರ್ಪು ನೀಡಿರುವುದನ್ನು ಪ್ರಶ್ನಿಸಿ ಸಿಂಗ್ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು.
ಸಿಂಗ್ ಅವರ ಮರಣದಂಡನೆ ದೃಢಪಡಿಸಿರುವುದನ್ನು ಉಲ್ಲೇಖಿಸಿ ನ್ಯಾಯಮೂರ್ತಿ ಸಿದ್ದಾರ್ಥ ಮೃದುಲಾ ಹಾಗೂ ಸಂಗೀತಾ ಧಿಂಗ್ರಾ ಸೆಹಗಲ್ ಅವರನ್ನು ಒಳಗೊಂಡ ಪೀಠ ಸಿಂಗ್ಗೆ ನೋಟಿಸು ಜಾರಿ ಮಾಡಿದೆ. ಪ್ರಸ್ತುತ ತಿಹಾರ್ ಜೈಲಿನಲ್ಲಿರುವ ಸಿಂಗ್ನನ್ನು ನವೆಂಬರ್ 14ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಪೀಠ ನೋಟಿಸು ಜಾರಿ ಮಾಡಿದೆ. ನವೆಂಬರ್ 20ರಂದು ವಿಚಾರಣಾ ನ್ಯಾಯಾಲಯ ಸಿಂಗ್ಗೆ ಮರಣ ದಂಡನೆ ವಿಧಿಸಿ ತೀರ್ಪು ನೀಡಿತ್ತು. ಈ ಮನವಿಯ ವಿಚಾರಣೆಯನ್ನು ಪೀಠ ಡಿಸೆಂಬರ್ 19ಕ್ಕೆ ನಿಗದಿಪಡಿಸಿದೆ.