ರಾಜಸ್ಥಾನ: ಇತರ ಪಕ್ಷಗಳನ್ನು ಸಂಪರ್ಕಿಸಿದ ಸಚಿನ್ ಪೈಲಟ್
ಜೈಪುರ,ಡಿ.11: ರಾಜಸ್ಥಾನದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತವನ್ನು ಗಳಿಸಿದ್ದರೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ಇತರ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನದ ಗೆಲುವು ಪಕ್ಷಕ್ಕೆ ದೊರೆತ ನೈತಿಕ ಗೆಲುವಾಗಿದೆ ಎಂದು ಅಭಿಪ್ರಾಯಿಸಿದ ಪೈಲಟ್ ರಾಜ್ಯದಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತವಿದ್ದರೂ ಇತರ ಸಮಾನ ಮನಸ್ಕ ಪಕ್ಷಗಳ ಜೊತೆ ಸೇರಿ ಸರಕಾರ ರಚಿಸಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.
ನಾನು ಇತರ ಪಕ್ಷಗಳ ಜೊತೆ ಮಾತುಕತೆಯಲ್ಲಿ ತೊಡಗಿದ್ದೇನೆ. ಈ ಫಲಿತಾಂಶವು ಬಿಜೆಪಿಯ ವಿರುದ್ಧವಾಗಿದೆ ಮತ್ತು ಬಿಜೆಪಿಯ ಹಠವಾದಿ ರಾಜಕೀಯಕ್ಕೆ ಆಘಾತ ನೀಡಿದೆ ಎಂದು ಸಚಿನ್ ಪೈಲಟ್ ತಿಳಿಸಿದ್ದಾರೆ. ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಗೆ ಇದಕ್ಕಿಂತ ಉತ್ತಮ ಉಡುಗೊರೆಯನ್ನು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ ಪೈಲಟ್, ಒಂದು ವರ್ಷದ ಹಿಂದೆ ಇದೇ ದಿನ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು ಎಂದು ತಿಳಿಸಿದ್ದಾರೆ.
ರಾಜಸ್ಥಾನದಲ್ಲಿ ಪೈಲಟ್ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಅಶೋಕ್ ಗೆಹ್ಲೊಟ್ ಮಧ್ಯೆ ಪದವಿಗಾಗಿ ತೆರೆಮರೆಯಲ್ಲಿ ನಡೆಯುತ್ತಿರುವ ಜಗಳ ಬಹಿರಂಗಗೊಳ್ಳುವ ಅಪಾಯವನ್ನು ತಳ್ಳಿ ಹಾಕಿರುವ ರಾಜ್ಯಾಧ್ಯಕ್ಷ ಸಚಿನ್ ಪೈಲಟ್, ಯಾರಿಗೆ ಯಾವ ಹುದ್ದೆಯನ್ನು ನೀಡಬೇಕು ಎಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸಲಿದ್ದಾರೆ ಎಂದು ತಿಳಿಸಿದ್ದಾರೆ.