ಛತ್ತೀಸ್ಗಢ: ಇಂದು ಕಾಂಗ್ರೆಸ್ನಿಂದ ಮುಖ್ಯಮಂತ್ರಿ ಘೋಷಣೆ
ರಾಯಪುರ, ಡಿ.15: ಛತ್ತೀಸ್ಗಢದ ನೂತನ ಮುಖ್ಯಮಂತ್ರಿ ಆಯ್ಕೆ ಸಂಬಂಧ ಕಾಂಗ್ರೆಸ್ನ ಹಿರಿಯ ಮುಖಂಡರು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಜತೆ ಶುಕ್ರವಾರ ಚರ್ಚೆ ನಡೆಸಿದ್ದು, ಇಂದು ಮುಖ್ಯಮಂತ್ರಿ ಹೆಸರನ್ನು ಪ್ರಕಟಿಸುವ ನಿರೀಕ್ಷೆ ಇದೆ.
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭೂಪೇಶ್ ಬಘೇಲ್, ಕಳೆದ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಟಿ.ಎಸ್.ಸಿಂಗ್ ದೇವ್, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ತಾಮ್ರಧ್ವಜ್ ಸಾಹು ಮತ್ತು ಮಾಜಿ ಕೇಂದ್ರ ಸಚಿವ ಡಾ.ಚರಣ್ದಾಸ್ ಮಹಾಂತ್ ಅವರು ಎಐಸಿಸಿ ವೀಕ್ಷಕ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಲ್.ಪೂನಿಯಾ ಜತೆಗೆ ಪಕ್ಷಾಧ್ಯಕ್ಷರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ರಾಯಪುರದಲ್ಲಿ ಶನಿವಾರ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆ ಸೇರಲಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಈ ಭೇಟಿ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದರು. ಹೊಸದಾಗಿ ಚುನಾಯಿತರಾದ ಶಾಸಕರ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಲು ಎಲ್ಲ ರಾಜ್ಯ ಮುಖಂಡರು ತಕ್ಷಣ ರಾಯಪುರಕ್ಕೆ ಮರಳಿದ್ದಾರೆ.
ಈ ಸಭೆಯಲ್ಲಿ ಎಐಸಿಸಿ ವೀಕ್ಷಕರು, ಪಕ್ಷದ ನಾಯಕ ಮತ್ತು ಸಿಎಂ ಆಯ್ಕೆ ಕುರಿತ ಪಕ್ಷಾಧ್ಯಕ್ಷರ ನಿರ್ಧಾರವನ್ನು ಪ್ರಕಟಿಸಲಿದ್ದಾರೆ. 90 ಶಾಸಕರ ವಿಧಾನಸಭೆಯಲ್ಲಿ ಭರ್ಜರಿ ಬಹುಮತ ಗಳಿಸಿದ ಕಾಂಗ್ರೆಸ್ ಪಕ್ಷಕ್ಕೆ ಸಿಎಂ ಹುದ್ದೆಗೆ ಹಲವು ಮಂದಿ ಅರ್ಹ ಮುಖಂಡರು ಇರುವುದು ತಲೆನೋವಾಗಿ ಪರಿಣಮಿಸಿದೆ.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಘೇಲ್, ಸಿಎಂ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದು ದಿಲ್ಲಿ ಬಿಡುವ ಮುನ್ನ, "ಇಂದು ರಾಜ್ಯಕ್ಕೆ ಹಾಗೂ ನಮಗೆಲ್ಲರಿಗೂ ಮಹತ್ವದ ದಿನ. ಕಾಂಗ್ರೆಸ್ ಹೈಕಮಾಂಡ್ ನನಗೆ ಬಹುಮತ ಪಡೆಯುವ ಹೊಣೆಯನ್ನು ವಹಿಸಿತ್ತು. ಇದೀಗ ಯಾವುದೇ ಜವಾಬ್ದಾರಿಯನ್ನು ನನಗೆ ನೀಡಿದರೂ, ಸಮರ್ಪಣಾ ಮನೋಭಾವದಿಂದ ನಿಭಾಯಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ. ಟಿ.ಎಸ್.ಸಿಂಗ್ದೇವ್ ಮತ್ತೊಬ್ಬ ಪ್ರಬಲ ಆಕಾಂಕ್ಷಿ.
ರವಿವಾರ ಅಥವಾ ಸೋಮವಾರ ನೂತನ ಮುಖ್ಯಮಂತ್ರಿಯ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆಗಳಿವೆ.