ದಿನದ ಕನಿಷ್ಠ ಒಂದು ಗಂಟೆ ಮೊಬೈಲ್ ಗೇಮ್ ಗಾಗಿ ವಿನಿಯೋಗಿಸುವ ಯುವ ಭಾರತೀಯರು
'ಪವರ್ ಆಫ್ ಮೊಬೈಲ್ ಗೇಮಿಂಗ್ ಇನ್ ಇಂಡಿಯಾ' ವರದಿ
ಚೆನ್ನೈ, ಡಿ. 17: ಭಾರತದಲ್ಲಿ ಸುಮಾರು 25 ಕೋಟಿ ಮೊಬೈಲ್ ಗೇಮರ್ಗಳಿದ್ದು, ದಿನಕ್ಕೆ ಕನಿಷ್ಠ ಎರಡು ಬಾರಿ ಮೊಬೈಲ್ ಗೇಮ್ ಆಡುತ್ತಾರೆ. ಕನಿಷ್ಠ ದಿನಕ್ಕೆ ಒಂದು ಗಂಟೆ ಸಮಯವನ್ನು ಇದಕ್ಕಾಗಿ ವಿನಿಯೋಗಿಸುತ್ತಾರೆ ಎಂಬ ಸ್ವಾರಸ್ಯಕರ ಸಂಗತಿ ಮೊಬೈಲ್ ಮಾರ್ಕೆಟಿಂಗ್ ಅಸೋಸಿಯೇಶನ್ನ "ಪವರ್ ಆಫ್ ಮೊಬೈಲ್ ಗೇಮಿಂಗ್ ಇನ್ ಇಂಡಿಯಾ" ವರದಿ ಬಹಿರಂಗಪಡಿಸಿದೆ.
ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್ಫಾರಂಗಳಾದ ನೆಟ್ಫ್ಲೆಕ್ಸ್ ಹಾಗೂ ಇತರ ಜಾಲತಾಣಗಳಲ್ಲಿ ವಿನಿಯೋಗಿಸುವುದಕ್ಕಿಂತಲೂ ಹೆಚ್ಚಿನ ಸಮಯವನ್ನು ಭಾರತೀಯರು ಮೊಬೈಲ್ ಗೇಮಿಂಗ್ನಲ್ಲಿ ಕಳೆಯುತ್ತಿದ್ದಾರೆ. ವೀಡಿಯೊ ಸ್ಟ್ರೀಮಿಂಗ್ನಲ್ಲಿ ಪ್ರತಿದಿನ ಕಳೆಯುವ ಸಮಯ ಸರಾಸರಿ 45 ನಿಮಿಷಗಳು ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ.
ಇನ್ನಷ್ಟು ಕುತೂಹಲದ ಸಂಗತಿಯೆಂದರೆ ಮೊಬೈಲ್ ಗೇಮರ್ಗಳು ಟಿವಿ ನೋಡುವುದಕ್ಕಿಂತಲೂ ಹೆಚ್ಚಿನ ಸಮಯವನ್ನು ಗೇಮಿಂಗ್ಗೆ ಬಳಸುತ್ತಾರೆ. ಪ್ಲೇಯರ್ ಅನ್ನೋನ್ಸ್ ಬ್ಯಾಟಲ್ಗ್ರೌಂಡ್ (ಪಿಯುಬಿಜಿ) ತನ್ನ ಮೊಬೈಲ್ ಅವತರಣಿಕೆ ಬಿಡುಗಡೆ ಮಾಡಿದ ಮೇಲೆ ಇದು ಅತ್ಯಂತ ಜನಪ್ರಿಯವಾಗಿದೆ. ಕ್ವಾರ್ಟ್ಸ್ ಸಮೀಕ್ಷೆಯ ಪ್ರಕಾರ, ಸಮೀಕ್ಷೆಗೆ ಗುರಿಪಡಿಸಿದ 1047 ಮಂದಿಯ ಪೈಕಿ ಶೇಕಡ 62ರಷ್ಟು ಮಂದಿ ತಾವು ಪಿಯುಬಿಜಿ ಆಡಿದ್ದಾಗಿ ಹೇಳಿದ್ದಾರೆ. ಇದು ಯುವಸಮೂಹದ ಏಕಾಂತಕ್ಕೆ ಕಾರಣವಾಗುತ್ತದೆ ಎಂಬ ಗ್ರಹಿಕೆಗಿಂತ ಭಿನ್ನವಾಗಿ, ಇದು ಭಾರತ ಮತ್ತು ವಿಶ್ವದ ಇತರ ದೇಶಗಳ ಆಟಗಾರರ ನಡುವೆ ಸಂಪರ್ಕ ಸೇತು ಎಂದು ಹಲವರು ಅಭಿಪ್ರಾಯಪಡುತ್ತಾರೆ.
ಆಟದ ವೇಳೆ ತಂಡದ ಸದಸ್ಯರ ಜತೆಗೆ ಸಂವಾದಕ್ಕೂ ಅವಕಾಶವಿದೆ. ಇದು ಎಷ್ಟು ಜನಪ್ರಿಯ ಎಂದರೆ, ಚೆನ್ನೈನ ವೆಲ್ಲೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇತ್ತೀಚೆಗೆ ವಿದ್ಯಾರ್ಥಿಗಳು ಇದನ್ನು ಆಡದಂತೆ ಸುತ್ತೋಲೆ ಹೊರಡಿಸಿದೆ. ಪಿಯುಬಿಜಿ ಚಾಂಪಿಯನ್ಶಿಪ್ ಮತ್ತು ಟೂರ್ನಿಗಳನ್ನು ದೇಶದ ಹಲವೆಡೆ ಆಯೋಜಿಸಲಾಗುತ್ತಿದೆ.