ಹರ್ಯಾಣ: ದೇಶದ ಅತಿದೊಡ್ಡ ಕ್ಯಾನ್ಸರ್ ಆಸ್ಪತ್ರೆ ಕಾರ್ಯಾರಂಭ
ಹೊಸದಿಲ್ಲಿ, ಡಿ. 18: ದೇಶದ ಅತಿದೊಡ್ಡ ಕ್ಯಾನ್ಸರ್ ಆಸ್ಪತ್ರೆ ರಾಷ್ಟ್ರೀಯ ಕ್ಯಾನ್ಸರ್ ಕೇಂದ್ರ (ಎನ್ಸಿಐ) ಹರ್ಯಾಣದ ಝಜ್ಜಾರ್ನಲ್ಲಿ ಕಾರ್ಯಾರಂಭ ಮಾಡಿದೆ. ಆಸ್ಪತ್ರೆಯ ಹೊರರೋಗಿ ವಿಭಾಗ ಇಂದಿನಿಂದ ಕಾರ್ಯ ಆರಂಭಿಸಿದೆ.
ಆಸ್ಪತ್ರೆಯ ಎಲ್ಲ ನಿರ್ಮಾಣ ಕಾಮಗಾರಿ ಮತ್ತು ಮೂಲಭೂತ ಸಾಧನ ಸಲಕರಣೆಗಳ ಅಳವಡಿಕೆ ಕಾರ್ಯ ಮುಗಿದಿದ್ದು, ಒಪಿಡಿ ಸೇವೆ ಆರಂಭಕ್ಕೆ ಸಿಬ್ಬಂದಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ದೇಶದ ಅತಿದೊಡ್ಡ ಸರ್ಕಾರಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಎಂಬ ಹೆಗ್ಗಳಿಕೆಯ ಈ ಆಸ್ಪತ್ರೆ ಮುಂದಿನ ಹತ್ತು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. 2035 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣವಾಗುತ್ತಿದೆ.
ಒಪಿಡಿ ಬ್ಲಾಕ್ ಮಂಗಳವಾರ ಕಾರ್ಯಾರಂಭ ಮಾಡಲಿದ್ದು, ಐಪಿಡಿ ಬ್ಲಾಕ್ನ ಸಿವಿಲ್ ಕಾಮಗಾರಿ ಮುಗಿದಿದೆ. ಸಾಧನಗಳನ್ನು ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. 2019ರ ಜನವರಿ ಒಳಗಾಗಿ 250 ಹಾಸಿಗೆಗಳ ಆಸ್ಪತ್ರೆ ಕಾರ್ಯಾರಂಭ ಮಾಡಲಿದ್ದು, ಆ ವೇಳೆಗೆ ಐಸಿಯು ಘಟಕ ಕೂಡಾ ಸಜ್ಜಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 2019ರ ಡಿಸೆಂಬರ್ ಒಳಗಾಗಿ 500 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಸಿದ್ಧವಾಗಲಿದೆ. 2020ರ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭವಾಗಲಿದೆ ಎಂದು ಮೂಲಗಳು ಹೇಳಿವೆ.
ದೆಹಲಿಯ ಎಐಐಎಂಎಸ್ ಕ್ಯಾಂಪಸ್ನಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿ ಈ ಆಸ್ಪತ್ರೆ ನಿರ್ಮಾಣವಾಗಿದ್ದು, 60 ಎಕರೆ ವಿಶಾಲ ಪ್ರದೇಶದಲ್ಲಿದೆ. ಒಟ್ಟು 710 ಹಾಸಿಗೆಗಳ ಈ ಆಸ್ಪತ್ರೆಯಲ್ಲಿ ಸರ್ಜಿಕಲ್ ಆಂಕಾಲಜಿಗೆ 200, ವೈದ್ಯಕೀಯ ಕ್ಯಾನ್ಸರ್ ಚಿಕಿತ್ಸೆಗೆ 200, ವಿಕಿರಣ ಚಿಕಿತ್ಸೆಗೆ 120, ಉಪಶಮನಕ್ಕೆ 40, ಐಸಿಯು, ಡೇಕೇರ್ ಮತ್ತು ಇತರ ವಿಭಾಗಗಳಿಗೆ 150 ಹಾಸಿಗೆಗಳಿರುತ್ತವೆ. ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ 25 ಆಪರೇಷನ್ ಥಿಯೇಟರ್ಗಳಿರುತ್ತವೆ.
110 ಮಂದಿ ವೈದ್ಯರು ಹಾಗೂ ನರ್ಸ್ಗಳಿಂದ ಕೂಡಿದ್ದು, 2 ಎಂಆರ್ಐ ಮೆಷಿನ್ಗಳು, 4 ಪೆಟ್ ಸ್ಕ್ಯಾನರ್, 3 ಬ್ರಾಕ್ಚಿಥೆರಪಿ ಯಂತ್ರಗಳು, 5 ಲೈನರ್ ಆಕ್ಸಿಲರೇಟರ್ಗಳಿದ್ದು, ಏಷ್ಯಾದ ಮೊಟ್ಟಮೊದಲ ಸ್ವಯಂಚಾಲಿತ ಕೋರ್ ಲ್ಯಾಬ್, ಸೆಕ್ಟರ್ ಪ್ರೊಟಾನ್ ಸೌಲಭ್ಯಗಳಿವೆ.