ನೋಟ್ ಬ್ಯಾನ್ ನಂತರ ಎಷ್ಟು ಹೊಸ ನೋಟುಗಳನ್ನು ಮುದ್ರಿಸಲಾಗಿತ್ತೆಂದು ಬಹಿರಂಗಪಡಿಸಿ: ಕೇಂದ್ರ ಮಾಹಿತಿ ಆಯೋಗ ಆದೇಶ
ಹೊಸದಿಲ್ಲಿ, ಡಿ.18: ನೋಟು ಅಮಾನ್ಯೀಕರಣವನ್ನು ಸರಕಾರ 2016ರ ನವೆಂಬರ್ ನಲ್ಲಿ ಘೋಷಿಸಿದ ನಂತರದ ವಾರಗಳಲ್ಲಿ 2,000 ರೂ. ಹಾಗೂ 500 ರೂ. ಮುಖಬೆಲೆಯ ಎಷ್ಟು ಹೊಸ ನೋಟುಗಳನ್ನು ಮುದ್ರಿಸಲಾಗಿತ್ತೆಂಬ ಮಾಹಿತಿಯನ್ನು ನೀಡುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಒಡೆತನದ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಲಿಮಿಟೆಡ್ ಸಂಸ್ಥೆಗೆ ಮಾಹಿತಿ ಆಯೋಗ ಆದೇಶಿಸಿದೆ.
ಈ ಮಾಹಿತಿ ಬಹಿರಂಗಗೊಳಿಸುವುದರಿಂದ ದೇಶದ ಆರ್ಥಿಕ ಹಿತಾಸಕ್ತಿಗಳ ಮೇಲೆ ಹೇಗೆ ವ್ಯತಿರಿಕ್ತ ಪರಿಣಾಮ ಬೀರುವುದು ಎಂದು ವಿವರಿಸಲು ಸಂಸ್ಥೆ ವಿಫಲವಾಗಿದೆ ಎಂದು ಮಾಹಿತಿ ಆಯುಕ್ತ ಸುಧೀರ್ ಭಾರ್ಗವ ಮೇಲಿನ ಆದೇಶ ನೀಡುವಾಗ ಹೇಳಿದ್ದಾರೆ. ಈ ಮಾಹಿತಿ ಬಹಿರಂಗಗೊಳಿಸಿದಲ್ಲಿ ನಕಲಿ ಕರೆನ್ಸಿ ನೋಟುಗಳ ಚಲಾವಣೆ ಹೆಚ್ಚಾಗಿ ವಿತ್ತೀಯ ಗೊಂದಲಕ್ಕೆ ಕಾರಣವಾಗಬಹುದೆಂದು ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಲಿಮಿಟೆಡ್ ಈ ಹಿಂದೆ ಹೇಳಿಕೊಂಡಿತ್ತು.
ನೋಟು ಅಮಾನ್ಯೀಕರಣದ ನಂತರ 2000 ರೂ. ಹಾಗೂ 500 ರೂ. ಮುಖಬೆಲೆಯ ಹೊಸ ನೋಟುಗಳ ಪೂರೈಕೆ ಸಮರ್ಪಕವಾಗಿಲ್ಲದೇ ಇದ್ದುದರಿಂದ ಜನರು ಎಟಿಎಂಗಳಲ್ಲಿ ಹಾಗೂ ಬ್ಯಾಂಕುಗಳಲ್ಲಿ ಉದ್ದುದ್ದ ಸರತಿ ನಿಲ್ಲುವ ಪ್ರಮೇಯ ಬಂದಿತ್ತು.
ಹರೀಂದರ್ ಢಿಂಗ್ರಾ ಎಂಬವರು ತಮ್ಮ ಆರ್ ಟಿಐ ಅರ್ಜಿಯಲ್ಲಿ ನವೆಂಬರ್ 9 ಹಾಗೂ ನವೆಂಬರ್ 30, 2016ರ ಅವಧಿಯಲ್ಲಿ ಮುದ್ರಣಗೊಂಡ ರೂ 2,000 ಹಾಗೂ ರೂ 500ರ ಹೊಸ ನೋಟುಗಳ ಸಂಖ್ಯೆಯ ಬಗ್ಗೆ ಮಾಹಿತಿ ಕೋರಿದ್ದರು. ಈ ಬಗ್ಗೆ ಸಮರ್ಪಕ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಅವರು ಕೇಂದ್ರ ಮಾಹಿತಿ ಆಯೋಗದ ಮೊರೆ ಹೋಗಿದ್ದರು.
ಕರೆನ್ಸಿ ನೋಟುಗಳ ಮುದ್ರಣ ಬಹಳ ಗೌಪ್ಯ ವಿಚಾರವಾಗಿರುವುದರಿಂದ ಅವುಗಳನ್ನು ಸಾರ್ವಜನಿಕರ ಜತೆ ಹಂಚಲು ಸಾಧ್ಯವಿಲ್ಲವೆಂದು ರಿಸವ್ ಬ್ಯಾಂಕ್ ಮುದ್ರಣ್ ಸಂಸ್ಥೆ ಆಯೋಗಕ್ಕೆ ತಿಳಿಸಿತ್ತು. ಅಷ್ಟೇ ಅಲ್ಲದೆ ಮಾಹಿತಿ ಬಹಿರಂಗಗೊಳಿಸಿದಲ್ಲಿ ದೇಶದ ಏಕತೆ ಮತ್ತು ಸಾರ್ವಭೌಮತ್ವಕ್ಕೆ ಹಾನಿಯಾಗುವುದೆಂದೂ ಇಂತಹ ಮಾಹಿತಿಗೆ ಆರ್ಟಿಐ ಕಾಯಿದೆಯ ಸೆಕ್ಷನ್ 8(1) (ಅ) ಅನ್ವಯ ವಿನಾಯಿತಿಯಿದೆಯೆಂದೂ ಆಯೋಗಕ್ಕೆ ಸಂಸ್ಥೆ ತಿಳಿಸಿತ್ತು.
ಆದರೆ ಎಷ್ಟು ನೋಟುಗಳನ್ನು ಮುದ್ರಿಸಲಾಗಿದೆ ಎಂಬ ಮಾಹಿತಿ ಅಷ್ಟೊಂದು ಸೂಕ್ಷ್ಮ ವಿಚಾರವಲ್ಲ ಹಾಗೂ ಇದರಿಂದ ನೋಟುಗಳಿಗೆ ಬಳಸಲಾದ ಕಚ್ಛಾ ಸಾಮಗ್ರಿ, ಸಾಗಾಟ ಮುಂತಾದ ಮಾಹಿತಿಗಳೇನೂ ಬಹಿರಂಗಗೊಳ್ಳುವುದಿಲ್ಲ ಎಂದು ಆಯೋಗ ತಿಳಿಸಿ ಅರ್ಜಿದಾರರು ಕೇಳಿದ ಮಾಹಿತಿ ನೀಡುವಂತೆ ಆದೇಶಿಸಿದೆ.