ಇಎಸ್ಐ ಆಸ್ಪತ್ರೆ ಬೆಂಕಿ ಅವಘಡ: ತನಿಖೆಗೆ ಆದೇಶಿಸಿದ ಮಹಾರಾಷ್ಟ್ರ ಸರಕಾರ
ಸಾವಿನ ಸಂಖ್ಯೆ 8ಕ್ಕೇರಿಕೆ
![ಇಎಸ್ಐ ಆಸ್ಪತ್ರೆ ಬೆಂಕಿ ಅವಘಡ: ತನಿಖೆಗೆ ಆದೇಶಿಸಿದ ಮಹಾರಾಷ್ಟ್ರ ಸರಕಾರ ಇಎಸ್ಐ ಆಸ್ಪತ್ರೆ ಬೆಂಕಿ ಅವಘಡ: ತನಿಖೆಗೆ ಆದೇಶಿಸಿದ ಮಹಾರಾಷ್ಟ್ರ ಸರಕಾರ](https://www.varthabharati.in/h-upload/uid/public://filefield_paths/mumbaihospitalfire_660x450_121818102210.jpg.jpg)
ಮುಂಬೈ,ಡಿ.18: ಮುಂಬೈಯ ಅಂಧೇರಿಯಲ್ಲಿರುವ ಇಎಸ್ಐಸಿ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ಎಂಟಕ್ಕೇರಿದ್ದು, ಈ ಮಧ್ಯೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಈ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ.
ಸೋಮವಾರ ಆಸ್ಪತ್ರೆಯಲ್ಲಿ ಕಾಣಿಸಿಕೊಂಡ ಬೆಂಕಿಯ ಜ್ವಾಲೆಗೆ ಒಂದು ಆರು ತಿಂಗಳ ಮಗು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದರು. ಮೃತದೇಹಗಳನ್ನು ಕೂಪರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿತ್ತು. ಹೆಚ್ಚಿನ ಸಾವುಗಳು ಹೊಗೆಯನ್ನು ಉಸಿರಾಡಿದ ಕಾರಣ ಉಸಿರುಗಟ್ಟಿ ಉಂಟಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಬೆಂಕಿ ಅವಘಡದ ಗಾಯಾಳುಗಳನ್ನು ನಗರದ ಆರು ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದ್ದು, ಅವರಲ್ಲಿ 25ಕ್ಕೂ ಅಧಿಕ ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿರುವ ಮುಖ್ಯಮಂತ್ರಿ ಫಡ್ನವಿಸ್ ಗಾಯಾಳುಗಳ ಶೀಘ್ರ ಗುಣಮುಖಕ್ಕಾಗಿ ಎಲ್ಲ ರೀತಿಯ ಸಹಾಯವನ್ನು ಮಾಡುವ ಭರವಸೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ ಹತ್ತು ಲಕ್ಷ ರೂ., ಗಂಭೀರ ಮತ್ತು ಸಣ್ಣಪುಟ್ಟ ಗಾಯಗಳನ್ನು ಹೊಂದಿದವರಿಗೆ ಕ್ರಮವಾಗಿ ತಲಾ ಎರಡು ಮತ್ತು ಒಂದು ಲಕ್ಷ ರೂ. ಪರಿಹಾರವನ್ನು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಹಾಯಕ ಸಚಿವ ಸಂತೋಷ್ ಕುಮಾರ್ ಗಂಗ್ವರ್ ಘೋಷಿಸಿದ್ದಾರೆ.