ಎನ್ ಎಸ್ ಎಸ್ ಕಚೇರಿಯಲ್ಲಿ ಕಪ್ಪು ಧ್ವಜ ಹಾರಾಟ: ಸಂಘಪರಿವಾರದ ಇಬ್ಬರು ಕಾರ್ಯಕರ್ತರ ಬಂಧನ
ಅಲಪ್ಪುಳ,ಡಿ.20: ಕೇರಳದ ಪಲಮೆಲ್ ಸಮೀಪದ ಕುಡಸ್ಸನದ್ನಲ್ಲಿರುವ ಎನ್ ಎಸ್ ಎಸ್ ಕಚೇರಿಯಲ್ಲಿ ಕಪ್ಪು ಧ್ವಜ ಹಾರಿಸಿದ ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ಸಂಘಪರಿವಾರದ ಇಬ್ಬರು ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ವಿಕ್ರಂ ನಾಯರ್ ಮತ್ತು ಶ್ರೀಜಿತ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಸಂಘಪರಿವಾರ ಮತ್ತು ಬಿಜೆಪಿ ಜೊತೆ ನಂಟು ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 7ರಂದು ಕುಡಸ್ಸನದ್ನ ಎನ್ ಎಸ್ ಎಸ್ ಪ್ರೌಢ ಶಾಲೆಯಲ್ಲಿ ದುಷ್ಕರ್ಮಿಗಳು ಕಪ್ಪು ಬಾವುಟ ಹಾರಿಸಿ, ನಾಯರ್ ಸೇವಾ ಸಮಾಜ (ಎನ್ ಎಸ್ ಎಸ್)ದ ಪ್ರಧಾನ ಕಾರ್ಯದರ್ಶಿ ಜಿ.ಸುಕುಮಾರನ್ ನಾಯರ್ ಹೆಸರ ಮೇಲೆ ಶವದ ಮೇಲಿಡುವ ಪುಷ್ಟಗುಚ್ಛವನ್ನು ಇಟ್ಟಿದ್ದರು. ಈ ಬಗ್ಗೆ ನೂರನಾಡ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿಗಳು ಯಾವ ಅಂಗಡಿಯಿಂದ ಪುಷ್ಟಗುಚ್ಛವನ್ನು ಖರೀದಿಸಿದ್ದಾರೆ ಎಂಬುದನ್ನು ತಿಳಿದುಕೊಂಡಿದ್ದರು. ಆಮೂಲಕ ಪ್ರಕರಣವನ್ನು ಬೇಧಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದರೆ ಇಬ್ಬರು ಇನ್ನೂ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.