ಮೋದಿ ವಿರುದ್ಧ ಘೋಷಣೆ ಕೂಗಿದ ಜೆ.ಎನ್.ಯು. ವಿದ್ಯಾರ್ಥಿ ಮುಖಂಡನ ಎಂಫಿಲ್ ಮೌಲ್ಯಮಾಪನಕ್ಕೆ ತಡೆ
ಹೊಸದಿಲ್ಲಿ, ಡಿ.22: "ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದ್ದಕ್ಕಾಗಿ ನನ್ನ ಎಂಫಿಲ್ ಮೌಲ್ಯಮಾಪನವನ್ನು ಕುಲಪತಿ ತಡೆಹಿಡಿದಿದ್ದಾರೆ" ಎಂದು ಜವಾಹರಲಾಲ್ ನೆಹರೂ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್.ಸಾಯಿ ಬಾಲಾಜಿ ಆಪಾದಿಸಿದ್ದಾರೆ.
ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿ ಸಭೆ ನಡೆಯುತ್ತಿದ್ದ ಸಭಾಂಗಣದ ಹೊರಗೆ ಮೋದಿ ವಿರೋಧಿ, ಕುಲಪತಿ ವಿರೋಧಿ ಹಾಗೂ ಆರೆಸ್ಸೆಸ್ ವಿರೋಧಿ ಘೋಷಣೆ ಕೂಗಿದ್ದಕ್ಕಾಗಿ ತಮ್ಮ ಅಧ್ಯಕ್ಷರ ಮೇಲೆ ವಿಚಾರಣೆ ನಡೆಯುತ್ತಿದೆ ಎಂದು ವಿದ್ಯಾರ್ಥಿ ಸಂಘದ ಪ್ರಕಟನೆ ಹೇಳಿದೆ.
"ಸಮಾನ ಕೆಲಸಕ್ಕೆ ಸಮಾನ ವೇತನ" ಎಂಬ ನ್ಯಾಯಾಲಯ ತೀರ್ಪನ್ನು ಸಂಭ್ರಮಿಸುವ ಗುತ್ತಿಗೆ ಕಾರ್ಮಿಕರ ಮೆರವಣಿಗೆಯಲ್ಲಿ ಪಾಲ್ಗೊಂಡ ಕಾರಣಕ್ಕೆ ಹಾಗೂ ಜೆಎನ್ಯು ಆಡಳಿತ ವರ್ಗದ ಆನ್ಲೈನ್ ಪ್ರವೇಶ ಹಗರಣದ ಬಗ್ಗೆ ಧ್ವನಿ ಎತ್ತಿದ್ದಕ್ಕಾಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪ್ರಕಟನೆ ವಿವರಿಸಿದೆ. ಇತರ ವಿದ್ಯಾರ್ಥಿ ಮುಖಂಡರ ವಿರುದ್ಧವೂ ರಾಜಕೀಯ ಪ್ರೇರಿತ ಹಾಗೂ ಸುಳ್ಳು ಪ್ರಕರಣಗಳನ್ನು ಹೂಡಿ ಕಿರುಕುಳ ನೀಡಲಾಗುತ್ತಿದೆ ಎಂದು ವಿದ್ಯಾರ್ಥಿ ಸಂಘ ಆಪಾದಿಸಿದೆ.
"ಜೆಎನ್ಯುನಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳ ಮೇಲೆ ನೇರವಾಗಿ ದಾಳಿ ಮಾಡುವ ಮೂಲಕ ಮೋದಿ ಸರ್ಕಾರ ವಿದ್ಯಾರ್ಥಿಗಳ ಧ್ವನಿ ಅಡಗಿಸುವ ಪ್ರಯತ್ನ ಮಾಡುತ್ತಿದೆ. ಬಾಲಾಜಿಯವರ ಎಂಫಿಲ್ ಮೌಲ್ಯಮಾಪನವನನು ಇದಕ್ಕಾಗಿ ತಡೆಹಿಡಿದಿದೆ" ಎಂದು ದೂರಿದೆ. ಮೋದಿ ಸರ್ಕಾರದ ಅಣತಿಯಂತೆ ಕುಲಪತಿ ಜಗದೀಶ್ ಕುಮಾರ್, ಉಪನ್ಯಾಸಕರಿಗೂ ನೋಟಿಸ್ ನೀಡುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಆಪಾದಿಸಲಾಗಿದೆ.