22 ಆರೋಪಿಗಳನ್ನು ಖುಲಾಸೆಗೊಳಿಸಿದ್ದು ನ್ಯಾಯಾಧೀಶರ ಕೊನೆಯ ತೀರ್ಪು
ಸೊಹ್ರಾಬುದ್ದೀನ್ ಎನ್ಕೌಂಟರ್ ಪ್ರಕರಣ
ಮುಂಬೈ, ಡಿ.22: ಸೊಹ್ರಾಬುದ್ದೀನ್ ಶೇಖ್,ಆತನ ಪತ್ನಿ ಕೌಸರ್ ಬಿ ಮತ್ತು ಸಹಾಯಕ ತುಳಸಿ ಪ್ರಜಾಪತಿ ಅವರ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಎಲ್ಲ 22 ಆರೋಪಿಗಳನ್ನು ಖುಲಾಸೆಗೊಳಿಸಿ ನೀಡಿದ ತೀರ್ಪು ವಿಶೇಷ ಸಿಬಿಐ ನ್ಯಾಯಾಧೀಶ ಎಸ್.ಜೆ.ಶರ್ಮಾ ಅವರ ವೃತ್ತಿಜೀವನದಲ್ಲಿಯ ಕೊನೆಯ ತೀರ್ಪಾಗಿತ್ತು. ಅವರು ಈ ತಿಂಗಳು ಸೇವೆಯಿಂದ ನಿವೃತ್ತರಾಗಲಿದ್ದಾರೆ.
‘ಇದು ನನ್ನ ಕೊನೆಯ ತೀರ್ಪು’ ಎಂದು ಆದೇಶದಲ್ಲಿ ತಿಳಿಸಿರುವ ನ್ಯಾ.ಶರ್ಮಾ,ಸಂತ್ರಸ್ತರ ಕುಟುಂಬವು ಪುತ್ರ,ಸೋದರನನ್ನು ಕಳೆದುಕೊಂಡಿರುವುದು ದುರದೃಷ್ಟಕರ. ಆದರೆ ಈ ಆರೋಪಿಗಳು ಅಪರಾಧವನ್ನೆಸಗಿದ್ದರು ಎನ್ನುವುದಕ್ಕೆ ಸಾಕಷ್ಟು ಸಾಕ್ಷಾಧಾರಗಳು ಇರಲಿಲ್ಲ. ಮೂರು ಜೀವಗಳನ್ನು ಕಳೆದುಕೊಂಡಿರುವ ಶೇಖ್ ಮತ್ತು ಪ್ರಜಾಪತಿ ಕುಟುಂಬಗಳ ಬಗ್ಗೆ ತನಗೆ ವಿಷಾದವಿದೆ. ಆದರೆ ಸ್ಥಾಪಿತ ವ್ಯವಸ್ಥೆಯಂತೆ ನ್ಯಾಯಾಲಯಗಳು ಸಾಕ್ಷಗಳನ್ನೇ ಆಧರಿಸಬೇಕಾಗಿದೆ ಎಂದರು.
ಗುಜರಾತ್ ಮತ್ತು ರಾಜಸ್ಥಾನಗಳ ಪೊಲೀಸ್ ಅಧಿಕಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಎಲ್ಲ ಆರೋಪಿಗಳು ವರ್ಷಗಳಷ್ಟು ಕಾಲ ನಡೆದ ವಿಚಾರಣೆ ವೇಳೆ ಜಾಮೀನಿನಲ್ಲಿ ಹೊರಗಿದ್ದರು.
13 ವರ್ಷಗಳಷ್ಟು ಹಳೆಯದಾದ ಪ್ರಕರಣವು 92 ಪ್ರಾಸಿಕ್ಯೂಷನ್ ಪರ ಸಾಕ್ಷಿಗಳು ಪ್ರತಿಕೂಲ ಸಾಕ್ಷ ನುಡಿದಿದ್ದು ಸೇರಿದಂತೆ ಹಲವಾರು ತಿರುವುಗಳನ್ನು ಕಂಡಿತ್ತು. 2010ರಲ್ಲಿ ಈಗಿನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೂ ಸ್ವಲ್ಪ ಕಾಲ ಬಂಧನಕ್ಕೊಳಗಾಗಿದ್ದರು.