ಹೊಸ ವರ್ಷಾಚರಣೆ: ದಿನದ ವಾಸ್ತವ್ಯಕ್ಕೆ 11 ಲಕ್ಷವೂ ದುಬಾರಿಯಲ್ಲ!
ಜೈಪುರ, ಡಿ.26: ಹೊಸ ವರ್ಷದ ಸಂಭ್ರಮಾಚರಣೆಯ ವಿಚಾರ ಬಂದಾಗ ಹಣದ ವಿಚಾರ ಗೌಣವಾಗುತ್ತದೆ. ಒಂದು ರಾತ್ರಿ ಈ ಹೋಟೆಲ್ಗಳಲ್ಲಿ ತಂಗಲು 11 ಲಕ್ಷ ರೂಪಾಯಿ ಕೂಡಾ ದುಬಾರಿಯಲ್ಲ!
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಹೋಟೆಲ್ ಹಆಗೂ ರೆಸಾರ್ಟ್ಗಳು ಭರ್ತಿಯಾಗಿದ್ದು, ಜೋಧ್ಪುರದ ಉಮೈದ್ ಭವನ್ ಪ್ಯಾಲೇಸ್ ಹಾಗೂ ಉದಯ್ಪುರದ ತಾಜ್ ಲೇಕ್ ಪ್ಯಾಲೇಸ್ನಲ್ಲಿ ಡಿಸೆಂಬರ್ 31ರ ರಾತ್ರಿ ವಾಸ್ತವ್ಯಕ್ಕೆ ನಿಗದಿಪಡಿಸಿದ ಈ ದರ ಆತಿಥ್ಯ ಉದ್ಯಮದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಇಷ್ಟಾಗಿಯೂ 2019ನ್ನು ತೀರಾ ಅದ್ದೂರಿಯಾಗಿ ಮತ್ತು ವಿಶಿಷ್ಟವಾಗಿ ಸ್ವಾಗತಿಸಲು ಉಳ್ಳವರು ಮುಗಿ ಬಿದ್ದಿದ್ದಾರೆ.
ಈ ವಿಶೇಷ ಸೂಟ್ಗಳಿಗೆ ಸಾಮಾನ್ಯವಾಗಿ ಇತರ ಕೊಠಡಿಗಳ ದರಕ್ಕೆ ಹೋಲಿಸಿದರೆ ಅಧಿಕ ದರ ನಿಗದಿಪಡಿಸಲಾಗಿರುತ್ತದೆ. ಆದರೆ ಈ ಬಾರಿಯ ಡಿಸೆಂಬರ್ 31ಕ್ಕೆ ಮಾತ್ರ ದಾಖಲೆ ದರ ನಿಗದಿಯಾಗಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಡಿಸೆಂಬರ್ನ ದರ ಶೇಕಡ 40ರಷ್ಟು ಅಧಿಕ ಎಂದು ಜೈಪುರ ರಾಮ್ಭಾಗ್ ಪ್ಯಾಲೇಸ್ನ ಸಿಬ್ಬಂದಿಯೊಬ್ಬರು ಹೇಳಿದ್ದಾರೆ. ಈ ಹೋಟೆಲ್ನಲ್ಲಿ ಡಿಸೆಂಬರ್ 31ರ ರಾತ್ರಿಗೆ ನಿಗದಿಪಡಿಸಿದ ದರ 8.52 ಲಕ್ಷ. 2017ರ ದರಕ್ಕೆ ಹೋಲಿಸಿದರೆ ಇದು ಶೇಕಡ 7ರಷ್ಟು ಅಧಿಕ.
ಸಾಮಾನ್ಯವಾಗಿ ಕಡಿಮೆ ಬುಕಿಂಗ್ ಇದ್ದಲ್ಲಿ ಕೊನೆಕ್ಷಣದಲ್ಲಿ ಶೇಕಡ 20ರಷ್ಟು ರಿಯಾಯ್ತಿ ನೀಡಲಾಗುತ್ತದೆ. ಆದರೆ ಹೊಸ ವರ್ಷಾಚರಣೆ ಸಂದರ್ಭಕ್ಕೆ ದರದಲ್ಲಿ ಯಾವ ಚೌಕಾಶಿಯೂ ಇಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಸಾಮಾನ್ಯ ಸೂಟ್ ವೆಲೆ 25 ಸಾವಿರದಿಂದ 70 ಸಾವಿರ ರೂ.ವರೆಗೂ ನಿಗದಿಯಾಗಿದೆ.
"ರಾಜಸ್ಥಾನದಷ್ಟು ಅಧಿಕ ಸಂಖ್ಯೆಯ ಹೋಟೆಲ್ ಹಾಗೂ ರೆಸಾರ್ಟ್ಗಳಿರುವ ನಗರಗಳು ಕಡಿಮೆ. ಹೊಸವರ್ಷಕ್ಕೆ ಜನ ರೆಸಾರ್ಟ್,ಐಷಾರಾಮಿ ವಿಶೇಷ ಪಾರಂಪರಿಕ ತಾಣಗಳನ್ನು ಆಯ್ಕೆ ಮಾಡುತ್ತಾರೆ. ರಾಜಸ್ಥಾನದಲ್ಲಿ ಇಂಥ ತಾಣಗಳು ಸಾಕಷ್ಟಿವೆ. ಈ ವಿಶೇಷ ಜನರಿಗೆ ಹಣ ಪ್ರಮುಖ ವಿಚಾರವಾಗುವುದಿಲ್ಲ. ಆ ವಿಶೇಷ ಅನುಭವ, ಖಾಸಗೀತನ ಮತ್ತು ಇತರ ಸೌಲಭ್ಯಗಳು ಮುಖ್ಯ" ಎಂದು ಐಟಿಸಿ ರಜಪೂತನದ ಪ್ರಧಾನ ವ್ಯವಸ್ಥಾಪಕ ಶೇಖರ್ ಸಾವಂತ್ ವಿವರಿಸುತ್ತಾರೆ.