ವೈದ್ಯೆಗೆ ಹಲ್ಲೆ: ಆರೋಪಿಯ ಬಂಧನ
ಮಂಗಳೂರು, ಡಿ.28: ನಗರದ ಫಳ್ನೀರ್ನಲ್ಲಿರುವ ಆಸ್ಪತ್ರೆಯೊಂದಕ್ಕೆ ತಂದೆಯ ಚಿಕಿತ್ಸೆಗೆಂದು ಆಗಮಿಸಿದ ಯುವಕನೊಬ್ಬ ವೈದ್ಯೆಯೊಬ್ಬರಿಗೆ ಹಲ್ಲೆ ಮಾಡಿದ ಘಟನೆ ನಡೆದಿದ್ದು, ಆರೋಪಿಯನ್ನು ಪಾಂಡೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಜಪ್ಪು ನಿವಾಸಿ ಅಬ್ದುಲ್ ರಹಿಮಾನ್ (35) ಬಂಧಿತ ಆರೋಪಿ.
ರಹಿಮಾನ್ ಮತ್ತು ಆತನ ಅಕ್ಕ ತಮ್ಮ ತಂದೆಗೆ ಚಿಕಿತ್ಸೆ ನೀಡಲು ಡಿ. 26ರಂದು ನಗರದ ಫಳ್ನೀರ್ನಲ್ಲಿರುವ ಆಸ್ಪತ್ರೆಯೊಂದಕ್ಕೆ ಬಂದಿದ್ದರು. ಈ ವೇಳೆ ಚಿಕಿತ್ಸೆ ವಿಚಾರಕ್ಕೆ ಸಂಬಂಧಿಸಿದಂತೆ ವೈದ್ಯರು ಮತ್ತು ರಹಿಮಾನ್ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಮಹಿಳಾ ವೈದ್ಯೆ ಮಧ್ಯೆ ಬಂದು ಸಮಾಧಾನ ಪಡಿಸುವ ಪ್ರಯತ್ನ ಮಾಡಿದ್ದಾರೆ. ಇದರಿಂದ ಕೋಪಗೊಂಡ ಆತ ವೈದ್ಯೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ವೈದ್ಯೆಯ ಕೆನ್ನೆಗೆ ಹೊಡೆದು, ದಾಂಧಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಯಿಂದ ಆಘಾತಗೊಂಡ ವೈದ್ಯರು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Next Story