ಲಾಭವನ್ನು ರೈತರೊಂದಿಗೆ ಹಂಚುವಂತೆ ಬಾಬಾ ರಾಮದೇವ್ ಕಂಪೆನಿಗೆ ನ್ಯಾಯಾಲಯ ಆದೇಶ
ನೈನಿತಾಲ್, ಡಿ. 29: ತನ್ನ ಲಾಭದ ಒಂದು ಅಂಶವನ್ನು ಸ್ಥಳೀಯ ರೈತರು ಹಾಗೂ ಸಮುದಾಯಗಳೊಂದಿಗೆ ಹಂಚಬೇಕೆಂದು ಯೋಗ ಗುರು ಬಾಬಾ ರಾಮದೇವ್ ಅವರು ನಡೆಸುತ್ತಿರುವ ಕಂಪೆನಿಗಳಲ್ಲೊಂದಾದ ದಿವ್ಯಾ ಫಾರ್ಮಸಿಗೆ ಉತ್ತರಾಖಂಡ ಹೈಕೋರ್ಟ್ ಆದೇಶಿಸಿದೆ.
ಉತ್ತರಾಖಂಡ ಜೀವವೈವಿಧ್ಯ ಮಂಡಳಿಯ ವಿರುದ್ಧ ದಿವ್ಯಾ ಫಾರ್ಮಸಿ ದಾಖಲಿಸಿದ್ದ ಅಪೀಲನ್ನು ತಿರಸ್ಕರಿಸುವ ವೇಳೆ ಹೈಕೋರ್ಟ್ ಮೇಲಿನ ಆದೇಶ ನೀಡಿದೆಯಲ್ಲದೆ ಜೀವ ವೈವಿಧ್ಯ ಕಾಯಿದೆ 2002ರ ಅನ್ವಯ ನ್ಯಾಯೋಚಿತ ಲಾಭವನ್ನು ಹಂಚಬೇಕೆಂಬುದನ್ನು ಎತ್ತಿ ಹಿಡಿದಿದೆ.
ಆಯುರ್ವೇದಿಕ್ ಮತ್ತು ಸಂಬಂಧಿತ ಉತ್ಪನ್ನಗಳ ತಯಾರಿಯಲ್ಲಿ ಪ್ರಾಕೃತಿಕ ಸಂಪನ್ಮೂಲಗಳು ಮುಖ್ಯ ಕಚ್ಛಾ ವಸ್ತುವಾಗಿದೆ ಎಂದು ಹೇಳಿದ ಜಸ್ಟಿಸ್ ಸುಧಾಂಶು ಧುಲಿಯಾ ಅವರ ಪೀಠ, ಫಾರ್ಮಸಿ ತನ್ನ 421 ಕೋಟಿ ರೂ. ಲಾಭದಲ್ಲಿ 2 ಕೋಟಿ ರೂ. ಅನ್ನು ಕಚ್ಛಾ ವಸ್ತು ಪೂರೈಸುವ ರೈತರೊಂದಿಗೆ ಹಂಚಬೇಕೆಂದು ಹೇಳಿದೆ.
ಇದಕ್ಕೂ ಮುಂಚೆ ಉತ್ತರಾಖಂಡ ಜೀವವೈವಿಧ್ಯ ಮಂಡಳಿಯು ಫಾರ್ಮಸಿಗೆ ತನ್ನ ಲಾಭವನ್ನು ಸ್ಥಳೀಯ ರೈತರೊಂದಿಗೆ ಹಂಚುವಂತೆ ಸೂಚಿಸಿದ್ದರೂ ಮಂಡಳಿಗೆ ಇಂತಹ ಆದೇಶ ನೀಡುವ ಹಕ್ಕಿಲ್ಲ ಹಾಗೂ ತಾನು ಇಂತಹ ಯಾವುದೇ ಪಾವತಿ ಮಾಡಬೇಕೆಂಬುದೂ ಇಲ್ಲ ಎಂದು ಸಂಸ್ಥೆ ಹೇಳಿಕೊಂಡಿತ್ತು.
ಮಂಡಳಿಗೆ ಇಂತಹ ಆದೇಶ ನೀಡುವ ಹಕ್ಕಿದೆ, ಜೈವಿಕ ಸಂಪತ್ತು ರಾಷ್ಟ್ರೀಯ ಆಸ್ತಿಯಾಗಿದೆಯಲ್ಲದೆ ಅವುಗಳನ್ನು ಉತ್ಪಾದಿಸುವ ಸ್ಳಳೀಯರಿಗೂ ಅದು ಸೇರಿದೆ ಎಂದು ನ್ಯಾಯಾಲಯ ಹೇಳಿತಲ್ಲದೆ ಭಾರತವು ವಿಶ್ವ ಸಂಸ್ಥೆಯ ಜೈವಿಕ ವೈವಿಧ್ಯ ಒಪ್ಪಂದಕ್ಕೆ ಸಹಿ ಹಾಕಿರುವುದರಿಂದ ಈ ಒಪ್ಪಂದದ ನಿಬಂಧನೆಗಳನ್ನು ಪಾಲಿಸಬೇಕಿದೆ ಎಂದೂ ತಿಳಿಸಿದೆ.