‘ಅಮ್ಮಚ್ಚಿ ಎಂಬ ನೆನಪು’ ಚಿತ್ರತಂಡದೊಂದಿಗೆ ಸಂವಾದ

ಮಂಗಳೂರು, ಡಿ.30: ಕರ್ನಾಟಕ ಸಾಹಿತ್ಯ ಅಕಾಡಮಿ ಮತ್ತು ಚಕೋರ-321 ಕವಿಕಾವ್ಯ-ವಿಚಾರ ವೇದಿಕೆ ಜಂಟಿ ಆಶ್ರಯದಲ್ಲಿ ರವಿವಾರ ‘ಅಮ್ಮಚ್ಚಿ ಎಂಬ ನೆನಪು’ ಚಿತ್ರತಂಡದೊಂದಿಗಿನ ಸಂವಾದ ಕಾರ್ಯಕ್ರಮವು ನಗರದ ಸಾಹಿತ್ಯ ಸದನದಲ್ಲಿ ಜರುಗಿತು.
‘ಗಟ್ಟಿ ಹೆಣ್ಣು ಅಮ್ಮಚ್ಚಿ ತನಗೆ ತೊಂದರೆ ತಂದೊಡ್ಡಿದ ವೆಂಕಪ್ಪಯ್ಯನನ್ನೇ ಮದುವೆಯಾಗುವ ತೀರ್ಮಾನ ತೆಗೆದುಕೊಳ್ಳಬಾರದಿತ್ತು. ಅವಳು ಪ್ರತಿಭಟಿಸಬಹುದಿತ್ತು’ ಎಂದು ಸಂವಾದ ಕಾರ್ಯಕ್ರಮದಲ್ಲಿ ಹಲವು ಮಹಿಳೆಯರಿಂದ ಆಕ್ಷೇಪ, ಬೇಸರ ವ್ಯಕ್ತವಾಯಿತು.
‘ಅಮ್ಮಚ್ಚಿ ಎಂಬ ನೆನಪು’ ಸಿನೆಮಾ ವಾಸ್ತವವಾಗಿದೆ. ನಮ್ಮ ಆಶಯ ಬೇರೆಯೇ ಇದೆ. ಅಮ್ಮಚ್ಚಿ ಗಟ್ಟಿ ಹೆಣ್ಣಾದರೂ, ಅವಳು ಎದುರಿಸುವ ಅಸಹಾಯಕತೆ. ಇಷ್ಟ ಇಲ್ಲದಿದ್ದರೂ ಆಕೆ ವೆಂಕಪ್ಪಯ್ಯನನ್ನು ಮದುವೆಯಾಗುವ ತೀರ್ಮಾನ ತೆಗೆದುಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ ಎಂದು ಚಿತ್ರದ ನಿರ್ದೇಶಕಿ ಚಂಪಾ ಪಿ.ಶೆಟ್ಟಿ ಹೇಳಿದರು.
ಇದೇ ಕತೆ ಆಧರಿಸಿ ನಡೆದ ರಂಗಭೂಮಿ ಪ್ರಯೋಗವೊಂದರ ಸಂದರ್ಭ ಮಹಿಳೆಯೋರ್ವರು ಅಮ್ಮಚ್ಚಿಯ ಪಾತ್ರಧಾರಿಯನ್ನು ಅಪ್ಪಿ ಹಿಡಿದು ‘ಮೇಡಂ ಇದು ನನದೇ ಕತೆಯಂತಿದೆ’ ಎಂದು ಅತ್ತಿದ್ದನ್ನು ನಿರ್ದೇಶಕಿ ಸ್ಮರಿಸಿಕೊಂಡರು.
‘ಪುಟ್ಟಮ್ಮತ್ತೆ ಪಾತ್ರವನ್ನು ಪುರುಷ ಮಾಡುವ ಅಗತ್ಯವೇನಿತ್ತು. ಓರ್ವ ಸಮರ್ಥ ಮಹಿಳೆಯಿಂದಲೇ ಈ ಪಾತ್ರವನ್ನು ಮಾಡಿಸಬಹುದಿತ್ತಲ್ಲವೇ?’ ಎಂದು ಬಿ.ಎಂ.ರೋಹಿಣಿ ಪ್ರಶ್ನಿಸಿದರು.
‘ರಂಗಭೂಮಿಯಲ್ಲಿ ಈ ಪಾತ್ರಕ್ಕೆ ಹೆಚ್ಚು ಜೀವ ತುಂಬಿದವರು ರಾಧಾಕೃಷ್ಣ ಉರಾಳ. ಆದ್ದರಿಂದ ಯಾವುದೇ ಕಾರಣಕ್ಕೆ ಅವರ ಪಾತ್ರವನ್ನು ಬದಲಿಸದಿರಲು ತೀರ್ಮಾನಿಸಿದ್ದೆವು. ಚಿತ್ರ ಬಿಡುಗಡೆ ಬಳಿಕ ಅತ್ಯಧಿಕ ಪ್ರಶಂಸೆ ಗಿಟ್ಟಿಸಿಕೊಂಡ ಪಾತ್ರವೂ ಇದಾಗಿದೆ’ ಎಂದು ನಿರ್ದೇಶಕಿ ತಂಡದ ತೀರ್ಮಾನವನ್ನು ಸಮರ್ಥಿಸಿಕೊಂಡರು.
ಅಭಿಪ್ರಾಯ ಮಂಡಿಸಿದ ಆಳ್ವಾಸ್ ಕಾಲೇಜು ಉಪನ್ಯಾಸಕಿ ಸುಧಾರಣಿ, ಪ್ರಾದೇಶಿಕ ಭಾಷೆಯ ಸೊಗಡು ಹೊಂದಿರುವ ಚಿತ್ರಕ್ಕೆ ಈ ಭಾಷೆಯೇ ಒಂದು ಮಿತಿಯನ್ನು ಸೃಷ್ಟಿಸಿದೆ ಎನ್ನುವುದು ಒಪ್ಪಲು ಸಾಧ್ಯವಿಲ್ಲ. ಹೆಣ್ಣಿನ ಭಾಷೆಯು ಮಿತಿಯನ್ನು ಮೀರಿದ್ದು ಎಂದರು.
ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಸ್ಥಾಪಕಾಧ್ಯಕ್ಷೆ ಕೆ.ಎ.ರೋಹಿಣಿ ಅಧ್ಯಕ್ಷತೆ ವಹಿಸಿದ್ದರು. ಚಿತ್ರಕ್ಕೆ ಸಾಹಿತ್ಯ ಒದಗಿಸಿದ್ದ ಡಾ. ವೈದೇಹಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆ ಮುಮ್ತಾಝ್ ಬೇಗಂ, ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಉಪಾಧ್ಯಕ್ಷೆ ವಿಜಯಲಕ್ಷ್ಮಿ, ಸಾಹಿತ್ಯ ಅಕಾಡಮಿ ಪ್ರತಿನಿಧಿಗಳಾದ ಅರುಣಾ ನಾಗರಾಜ್, ಜ್ಯೋತಿ ಚೇಳಾರು, ಚಿತ್ರದ ನಿರ್ಮಾಪಕ ಪ್ರಕಾಶ್ ಶೆಟ್ಟಿ, ತಂತ್ರಜ್ಞ ವೇಣು, ಪಾತ್ರಧಾರಿ ಗಳಾದ ಗೀತಾ ಸುರತ್ಕಲ್ ಉಪಸ್ಥಿತರಿದ್ದರು.