ಸಿಎಂ ಮಧ್ಯಪ್ರವೇಶಕ್ಕೆ ಮೀನುಗಾರರ ಆಗ್ರಹ: 3 ದಿನದೊಳಗೆ ಪತ್ತೆ ಹಚ್ಚಲು ಕೇಂದ್ರ, ರಾಜ್ಯಕ್ಕೆ ಗಡವು
ಬೋಟು, 7ಮಂದಿ ಮೀನುಗಾರರ ನಿಗೂಢ ನಾಪತ್ತೆ ಪ್ರಕರಣ

ಉಡುಪಿ, ಡಿ.31: ಮಲ್ಪೆ ಬಂದರಿನಿಂದ ಡಿ.13ರಂದು ರಾತ್ರಿ ಆಳ ಸಮುದ್ರದ ಮೀನುಗಾರಿಕೆ ತೆರಳಿ ಡಿ.15ರ ರಾತ್ರಿಯಿಂದ ನಿಗೂಢವಾಗಿ ನಾಪತ್ತೆಯಾಗಿರುವ ಮಲ್ಪೆಯ ‘ಸುವರ್ಣ ತ್ರಿಭುಜ’ ಬೋಟು ಹಾಗೂ ಅದರಲ್ಲಿದ್ದ 7 ಮಂದಿ ಮೀನುಗಾರರನ್ನು ಇನ್ನೂ ಮೂರು ದಿನಗಳೊಳಗೆ ಪತ್ತೆ ಹಚ್ಚಬೇಕು, ತಪ್ಪಿದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಮಲ್ಪೆ ಮೀನುಗಾರರ ಸಂಘ ಎಚ್ಚರಿಕೆ ನೀಡಿದೆ.
ಸೋಮವಾರ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಡಿ.15ರಿಂದ ಈವರೆಗೆ ಮಲ್ಪೆಯ ಮೀನುಗಾರರ ತಂಡಗಳು, ಗೋವಾ, ಮಹಾರಾಷ್ಟ್ರಗಳ ಮೀನುಗಾರರೊಂದಿಗೆ, ಮಂಗಳೂರಿನ ಕರಾವಳಿ ಕಾವಲು ಪಡೆಯಲ್ಲದೇ ಗೋವಾ ಮತ್ತು ಮಹಾರಾಷ್ಟ್ರದ ಕಾವಲು ಪಡೆ ಹಾಗೂ ನೌಕಾಪಡೆಯ ನೆರವಿನಿಂದ ಎಲ್ಲಾ ಕಡೆಗಳಲ್ಲಿ ಹುಡುಕಿದ್ದರೂ, ಇದುವರೆಗೆ ನಾಪತ್ತೆಯಾದ ಬೋಟು ಹಾಗೂ ಅದರಲ್ಲಿದ್ದ 7 ಮಂದಿ ಮೀನುಗಾರರು ಕುರುಹು ಹಾಗೂ ಸುಳಿವು ಸಿಕ್ಕಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಹೀಗಾಗಿ ಸರಕಾರಗಳು, ಕರ್ನಾಟಕ ಕರಾವಳಿಯಲ್ಲಿ ಮೊದಲ ಬಾರಿ ಘಟಿಸಿರುವ ಈ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಕರ್ನಾಟಕದ ಮುಖ್ಯಮಂತ್ರಿಗಳು ಖುದ್ದಾಗಿ ಪ್ರಧಾನ ಮಂತ್ರಿ ಹಾಗೂ ಕೇಂದ್ರ ರಕ್ಷಣಾ ಸಚಿವರೊಂದಿಗೆ ಸಮಾಲೋಚನೆ ನಡೆಸಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಮೂಲಕ ಎಲ್ಲಾ ವಿಧಾನಗಳಿಂದ ಶೀಘ್ರವೇ ಪತ್ತೆ ಕಾರ್ಯ ನಡೆಸಿ ಬೋಟ್ ಹಾಗೂ ಮೀನುಗಾರರನ್ನು ಮೂರು ದಿನದೊಳಗೆ ಪತ್ತೆ ಹಚ್ಚಬೇಕು ಎಂದರು.
ಇದರಲ್ಲಿ ಸರಕಾರಗಳು ವಿಫಲವಾದರೆ, ಜ.2ರಂದು ಬೆಳಗ್ಗೆ 10:30ಕ್ಕೆ ಮಲ್ಪೆ ಬಂದರಿನಲ್ಲಿ ರಾಜ್ಯದ ಎಲ್ಲಾ ಬಂದರುಗಳ ಮೀನುಗಾರರ ಸಮಾಲೋಚನಾ ಸಭೆಯನ್ನು ಕರೆದಿದ್ದು, ಇದರಿಂದ ತೆಗೆದುಕೊಳ್ಳಬೇಕಾದ ಮುಂದಿನ ಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಹಾಗೂ ಉಗ್ರ ಪ್ರತಿಭಟನೆ ನಡೆಸಲು ಮುಂದಾಗುವುದಾಗಿ ಸತೀಶ್ ಕುಂದರ್ ತಿಳಿಸಿದರು.
ಬೋಟ್ ನಾಪತ್ತೆಯಿಂದಾಗಿ ಕರಾವಳಿಯ ಸಮಸ್ತ ಮೀನುಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಪ್ರಕೃತಿಯೊಂದಿಗೆ ಸೆಣಸುವ ಮೀನುಗಾರರ ಜೀವಕ್ಕೆ ಭದ್ರತೆಯೇ ಇಲ್ಲದಂತಾಗಿದ್ದು, ಇದರಿಂದ ಘಟನೆಯ ಬಳಿಕ ಯಾವುದೇ ಬೋಟು ಕಡಲಿಗಿಳಿಯುತ್ತಿಲ್ಲ. ಮೀನುಗಾರಿಕೆಯಿಂದ ಮರಳಿದ ಸುಮಾರು ಒಂದು ಸಾವಿರಕ್ಕೂ ಅಧಿಕ ಬೋಟುಗಳು ಈಗ ಬಂದರಿನಲ್ಲಿ ಲಂಗರು ಹಾಕಿವೆ. ನಾಪತ್ತೆಯಾಗಿರುವ ನಮ್ಮ ಸಮುದಾಯದ ಏಳು ಮಂದಿಯ ಬಗ್ಗೆ ಮಾಹಿತಿ ನೀಡಿ ಬಳಿಕ ನಾವು ಮತ್ತೆ ಕಡಲಿಗಿಳಿಯುತ್ತೇವೆ ಎಂದು ಎಲ್ಲರೂ ಹೇಳುತಿದ್ದಾರೆ ಎಂದರು.
ಡಿ.15ರ ರಾತ್ರಿ ಒಂದು ಗಂಟೆ ಎಲ್ಲಾ ಸಂಪರ್ಕಗಳನ್ನು ಕಡಿದುಕೊಂಡು ನಾಪತ್ತೆಯಾದ ಬೋಟು ಹಾಗೂ ಮೀನುಗಾರರ ಪತ್ತೆಗಾಗಿ ಶಾಸಕರು, ಸಂಸದರು, ಎಸ್ಪಿ, ಡಿಸಿ ಎಲ್ಲರಿಗೂ ಮನವಿ ಮಾಡಿದ್ದೇವೆ. ಆದರೆ ಇದುವರೆಗೆ ಯಾವುದೇ ಫಲ ದೊರಕಿಲ್ಲ. ಮಲ್ಪೆಯ 1100 ಆಳಸಮುದ್ರ ಮೀನುಗಾರರು ಮೀನುಗಾರಿಕೆಯನ್ನೇ ಸ್ಥಗಿತಗೊಳಿಸಿದ್ದಾರೆ ಎಂದು ಅವರು ವಿವರಿಸಿದರು.
ಬೋಟ್ ಯಾವ ರೀತಿಯಲ್ಲೂ ಹಾನಿ, ಅವಘಡಕ್ಕೆ ಸಿಲುಕಿರಲು ಸಾಧ್ಯವಿಲ್ಲ. ಬೋಟ್ನಲ್ಲಿ ಪ್ಲಾಸ್ಟಿಕ್ ಬ್ಯಾಗ್, ಇತರೆ ಪರಿಕರಗಳ ಸಹಿತ 7-8 ಸಾವಿರ ಲೀಟರ್ ಡೀಸೆಲ್ ಸಂಗ್ರಹವಿದೆ. ಒಂದು ವೇಳೆ ಅವಘಡವೇನಾದರೂ ಸಂಭವಿಸಿದ್ದರೆ ಒಂದೂವರೆ ಕಿ.ಮೀ. ದೂರದವರೆಗೂ ಡೀಸೆಲ್ ಸೋರಿಕೆಯ ಕುರುಹು ಸಿಗುತ್ತದೆ. ಆದರೆ ಆ ಸಂದರ್ಭದಲ್ಲಿ ತೂಫಾನ್, ಹವಾಮಾನ ಸಮಸ್ಯೆಯೂ ಇರಲಿಲ್ಲ. ಯಾವ ಕುರುಹು ಸಿಗದೇ ಒಮ್ಮೆಗೆ 7 ಮಂದಿಯ ಮೊಬೈಲ್ ಸ್ವಿಚ್ ಆಫ್ ಆಗಿರುವುದು ಅನುಮಾನಕ್ಕೆ ಎಡೆಮಾಡಿದೆ ಎಂದರು.
ಹುಡುಕಾಟ ವಿಫಲ: ನಾಪತ್ತೆಯಾಗಿರುವ ಬೋಟ್ ಹಾಗೂ ಮೀನುಗಾರರ ಬಗ್ಗೆ ಕೇಂದ್ರದ ಗಮನಕ್ಕೂ ತಂದಿದ್ದು, ಹೆಲಿಕ್ಯಾಪ್ಟರ್, ನೌಕಾಪಡೆ ಮೂಲಕ ಹುಡುಕಾಟ ನಡೆಯುತ್ತಿದೆ. ಕೋಸ್ಟ್ಗಾರ್ಡ್ನ 3 ತಂಡ, ಎಸ್ಪಿ ರಚಿಸಿದ ಪೊಲೀಸರ 2 ತಂಡ ಹಾಗೂ 9 ಮಂದಿ ಮೀನುಗಾರರ 3 ತಂಡಗಳನ್ನು ರಚಿಸಿ ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ಮಹಾರಾಷ್ಟ್ರ, ಗೋವಾ ಗಡಿ ಭಾಗದಲ್ಲಿ ಹುಡುಕಿದ್ದು, ಯಾವುದೇ ಸುಳಿವು ಸಿಕ್ಕಿಲ್ಲ. ಮನೆಯವರಿಗೆ ಉತ್ತರ ನೀಡುವ ಪರಿಸ್ಥಿತಿಯಲ್ಲೂ ನಾವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬೋಟ್ ಅಪಹರಣ ಸಾಧ್ಯತೆ: ಕರಾವಳಿ ತೀರದಿಂದ 12 ನಾಟಿಕಲ್ ಮೈಲಿ ದೂರದಲ್ಲಿ ಮೀನುಗಾರಿಕೆ ಅವಕಾಶವಿದ್ದು, ಮಹಾರಾಷ್ಟ್ರ ಮತ್ತು ಗೋವಾದ ಸಿಂಧುದುರ್ಗಾದಿಂದ 60 ಮೀಟರ್ ಅಂತರದಲ್ಲಿ ಘಟನೆ ನಡೆದಿದ್ದು, ಹೀಗಾಗಿ ಬೋಟನ್ನು ಕಳವು ಮಾಡಿರುವ ಅನುಮಾನವಿದೆ. ಈ ಬೋಟ್ನ್ನು ಡ್ರಗ್ಸ್ ಮಾಫಿಯಾ/ ಖದೀಮರ ತಂಡ ತಮ್ಮ ಕೃತ್ಯಕ್ಕೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಅಪಹರಿಸಿರುವ ಸಾಧ್ಯತೆ ಇದೆ ಎಂವರು ಸಂಶಯ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಲ್ಪೆ ಮೀನುಗಾರರ ಸಂಘದ ಉಪಾಧ್ಯಕ್ಷ ನಾಗರಾಜ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಗೋಪಾಲ ಆರ್.ಕೆ., ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ, ಗುಂಡು ಬಿ.ಅಮೀನ್, ರಾಮಚಂದ್ರ ಕುಂದರ್, ನಾರಾಯಣ ಕರ್ಕೇರ, ಸೋಮನಾಥ ಕಾಂಚನ್, ನಿತ್ಯಾನಂದ ಕೋಟ್ಯಾನ್, ಗಂಗಾಧರ ಉಪಸ್ಥಿತರಿದ್ದರು.
''ಕೊಳವೆ ಬಾವಿಯೊಳಗೆ ಮಗು ಬಿದ್ದರೆ ರಾಜ್ಯ ಸರಕಾರ ತಕ್ಷಣ ಸ್ಪಂಧಿಸುತ್ತದೆ, ಬಸ್ ಅವಘಡ ಸಂಭವಿಸಿ ಕೆಲವರು ಸತ್ತರೆ, ರೈತರು ಆತ್ಮಹತ್ಯೆ ಮಾಡಿಕೊಂಡಾಗ ಸ್ಪಂದಿಸುವ ಸರಕಾರಗಳಿಗೆ ಮೀನುಗಾರರ ಕಷ್ಟ ಕಾಣುತ್ತಿಲ್ಲ. ಘಟನೆ ನಡೆದು 15 ದಿನಗಳಾಗಿವೆ. ಕೇಂದ್ರ ಹಾಗೂ ರಾಜ್ಯಗಳು ಯಾವುದೇ ಸ್ಪಂದನೆ ತೋರಿಸುತ್ತಿಲ್ಲ. ನಮ್ಮ ಪ್ರಾಣಕ್ಕೆ ಬೆಲೆಯೇ ಇಲ್ಲದಾಗಿದೆ. ಈ ನಿಟ್ಟಿನಲ್ಲಿ ಜ.2ಕ್ಕೆ ಮಲ್ಪೆಯಲ್ಲಿ ಸಮಾಲೋಚನಾ ಸಭೆ ಕರೆದಿದ್ದು, ಈ ಬಗ್ಗೆ ಚರ್ಚೆ ಮಾಡಿ ಪ್ರತಿಭಟನೆಯ ಸ್ವರೂಪದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇವೆ.''
-ಗುಂಡು ಬಿ.ಅಮೀನ್
ಸುಳಿವು ನೀಡದೇ ನಿಗೂಢ ನಾಪತ್ತೆ
ಸುಳಿವು ನೀಡದೇ ನಿಗೂಢ ನಾಪತ್ತೆ ಮಲ್ಪೆ ಬಂದರಿನಿಂದ ಡಿ.13ರ ರಾತ್ರಿ ಬಡಾನಿಡಿಯೂರಿನ ಚಂದ್ರಶೇಖರ್ ಕೋಟ್ಯಾನ್ ಮಾಲಕತ್ವದ ಅಳಸಮುದ್ರ ಟ್ರಾಲ್ಬೋಟ್ ‘ಸುವರ್ಣ ತ್ರಿಭುಜ’, 15-20 ಇತರೆ ಬೋಟುಗಳೊಂದಿಗೆ ಮೀನುಗಾರಿಕೆಗಾಗಿ ತೆರಳಿತ್ತು. ಇದರಲ್ಲಿ ಚಂದ್ರಶೇಖರ್ ಸಹಿತ ಏಳು ಮಂದಿ ಮೀನುಗಾರರಾದ ದಾಮೋದರ್, ಲಕ್ಷ್ಮಣ, ಸತೀಶ್, ರವಿ, ಹರೀಶ್, ರಮೇಶ್ ಇದ್ದರು.
ಡಿ. 15ರ ರಾತ್ರಿ ಒಂದು ಗಂಟೆಯವರೆಗೆ ಬೋಟ್, ವಾಸುದೇವ ಬೋಟ್ನ ಮೀನುಗಾರರೊಂದಿಗೆ ಸಂಪರ್ಕದಲ್ಲಿತ್ತು. ಆದರೆ ಆ ಬಳಿಕ ಅದು ಸಂಪರ್ಕ ಕಳೆದುಕೊಂಡಿತು. ಬೋಟಿನಲ್ಲಿದ್ದ ವಯರ್ಲೆಸ್ ಆಗಲಿ, ಮೀನುಗಾರರ ಮೊಬೈಲ್ ಆಗಲಿ ಎಲ್ಲವೂ ಹಠಾತ್ತನೆ ಸ್ತಬ್ಧಗೊಂಡಿತು. ಮರುದಿನ ಬೆಳಗಿನಿಂದ ಉಳಿದೆಲ್ಲಾ ಬೋಟುಗಳು ಸುವರ್ಣ ತ್ರಿಭುಜಕ್ಕಾಗಿ ಹುಡುಕಾಟ ನಡೆಸಿದವು. ಮೂರ್ನಾಲ್ಕು ದಿನಗಳ ಹುಡುಕಾಟದ ಬಳಿಕವೂ ಸುಳಿವು ಸಿಗದಾಗ ವಿಷಯದ ಗಂಭೀರತೆ ಅರಿವಾಗಿ ಎಲ್ಲಾ ಬೋಟುಗಳು ಡಿ.21ರ ರಾತ್ರಿ ಮಲ್ಪೆಗೆ ಮರಳಿ ಮರುದಿನ ಬೆಳಗ್ಗೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಲಾಯಿತು ಎಂದರು.
ಬೋಟ್ನಲ್ಲಿದ್ದ ಒಬ್ಬ ಮೀನುಗಾರರ ಮೊಬೈಲ್ಗೆ ಡಿ.16ರ ರಾತ್ರಿ 1ಗಂಟೆಗೆ ಮಿಸ್ಟ್ಕಾಲ್ ಮಹಾರಾಷ್ಟ್ರದ ಸಿಂಧುದುರ್ಗ ಬಿಎಸ್ಎನ್ಎಲ್ ಟವರ್ನಿಂದ ಹೋದ ಮಾಹಿತಿ ಇದೆ. ಆದರೆ ಬೋಟಿನಲ್ಲಿದ್ದ ವಯರ್ಲೆಸ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸತೀಶ್ ಕುಂದರ್ ತಿಳಿಸಿದರು.