ತನ್ನ ಇಬ್ಬರು ಮಕ್ಕಳು ಸಹಿತ 6 ಮಂದಿಯನ್ನು ಗುಂಡಿಕ್ಕಿ ಕೊಂದ
ಹೊಸ ವರ್ಷಾಚರಣೆ ಪಾರ್ಟಿ ವೇಳೆ ಘಟನೆ
ಬ್ಯಾಂಗ್ಕಾಕ್, ಜ. 1: ಹೊಸ ವರ್ಷದ ಮುನ್ನಾ ದಿನದ ಪಾರ್ಟಿಯ ಸಂದರ್ಭ ಅತ್ತೆ ಮಾವಂದಿರು ತನ್ನನ್ನು ತಾತ್ಸಾರದಿಂದ ನೋಡಿದ್ದಾರೆಂದು ಆಕ್ರೋಶಗೊಂಡ ಥಾಯ್ ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳೂ ಸೇರಿದಂತೆ ಕುಟುಂಬ ಆರು ಮಂದಿಯನ್ನು ಗುಂಡಿಕ್ಕಿ ಸಾಯಿಸಿ ನಂತರ ತನಗೆ ತಾನೇ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಘಟನೆ ದಕ್ಷಿಣ ಪ್ರಾಂತ್ಯದ ಚುಂಫೊನ್ ಎಂಬ ಪಟ್ಟಣದಲ್ಲಿ ನಡೆದಿದೆ. ಸುಚೀಪ್ ಸೊರ್ನ್ ಸುಂಗ್ ಎಂಬಾತ ಹೊಸ ವರ್ಷಾಚರಣೆಗೆ ತನ್ನ ಪತ್ನಿಯ ಕುಟುಂಬದ ಜತೆಗಿದ್ದಾಗ ಈ ಘಟನೆ ನಡೆದಿದ್ದು, ಆತ ಬಹಳಷ್ಟು ಮದ್ಯ ಸೇವಿಸಿದ್ದ ಹಾಗೂ ಫಟೋ ಜಿಲ್ಲೆಯ ಬ್ಯೂಟಿ ಪಾರ್ಲರ್ ಒಂದರಲ್ಲಿ ಈ ಪಾರ್ಟಿ ನಡೆಯುತ್ತಿದ್ದಾಗ ತನ್ನ ಪಿಸ್ತೂಲು ಹೊರತೆಗೆದಿದ್ದ. ಆತನ ಆಕ್ರೋಶಕ್ಕೆ ಆತನ ಒಂಬತ್ತು ವರ್ಷದ ಪುತ್ರ ಹಾಗೂ ಆರು ವರ್ಷದ ಪುತ್ರಿ ಕೂಡ ಬಲಿಯಾಗಿದ್ದಾರೆ.
ತಾನು ಕುಟುಂಬದ ಅಳಿಯನಾಗಿರುವ ಹೊರತಾಗಿಯೂ ತನ್ನ ಪತ್ನಿಯ ಕುಟುಂಬ ತನಗೆ ಮರ್ಯಾದೆ ನೀಡುತ್ತಿಲ್ಲ ಎಂದು ಆತ ಸಿಟ್ಟುಗೊಂಡಿದ್ದ ಎನ್ನಲಾಗಿದೆ. ಆತನ ಕೈಯ್ಯಲ್ಲಿ ಸಾವಿಗೀಡಾದ ಇತರ ನಾಲ್ಕು ಮಂದಿಯಲ್ಲಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರೂ ಸೇರಿದ್ದಾರೆ. ಅವರು 47ರಿಂದ 71 ವರ್ಷ ವಯೋಮಿತಿಯವರಾಗಿದ್ದಾರೆ.