ಗಂಡಂದಿರಿಗೆ ವಿಚ್ಛೇದನ ನೀಡಿ ದೇವಸ್ಥಾನದಲ್ಲಿ ಮದುವೆಯಾದ ಮಹಿಳೆಯರು !
ಲಕ್ನೊ, ಜ.1: ಕಾಲೇಜು ದಿನಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದ ಮಹಿಳೆಯರಿಬ್ಬರು, ಬಲವಂತದ ಮದುವೆಯ ಬಳಿಕ ತಮ್ಮ ಪತಿಯಂದಿರಿಗೆ ಡೈವೋರ್ಸ್ ನೀಡಿ ದೇವಸ್ಥಾನವೊಂದರಲ್ಲಿ ಮದುವೆಯಾದ ಅಪರೂಪದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಹಾಮಿರ್ಪುರ ನಿವಾಸಿಗಳಾದ 24 ಮತ್ತು 26 ವರ್ಷದ ಇಬ್ಬರು ಮಹಿಳೆಯರು ದೇವಸ್ಥಾನದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡರು. ಆದರೆ ಈ ಮದುವೆಯನ್ನು ನೋಂದಣಿ ಮಾಡಿಕೊಳ್ಳಲು ನೋಂದಣಾಧಿಕಾರಿ ನಿರಾಕರಿಸಿದ್ದಾರೆ. ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್ನ ಸಾಂವಿಧಾನಿಕ ಪೀಠವು ಸೆ.6ರಂದು ತೀರ್ಪು ನೀಡಿತ್ತು. ಆದರೆ ಸಲಿಂಗಿಗಳ ವಿವಾಹಕ್ಕೆ ದೇಶದ ಕಾನೂನಿನಲ್ಲಿ ಮಾನ್ಯತೆ ನೀಡಿಲ್ಲ.
ಇವರಿಬ್ಬರು ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಪರಸ್ಪರ ಆಕರ್ಷಿತರಾಗಿದ್ದರು. ಆದರೆ ಈ ವಿಷಯ ಮನೆಯಲ್ಲಿ ತಿಳಿಯುತ್ತಿದ್ದಂತೆಯೇ ಇಬ್ಬರ ಮನೆಯವರೂ ವಿರೋಧಿಸಿ ಕಾಲೇಜು ಶಿಕ್ಷಣವನ್ನು ಅರ್ಧಕ್ಕೇ ಸ್ಥಗಿತಗೊಳಿಸಿದ್ದರು. ಬಳಿಕ ಆರು ತಿಂಗಳೊಳಗೆ ಇಬ್ಬರಿಗೂ ಗಂಡು ಹುಡುಕಿ ಮದುವೆ ಮಾಡಲಾಗಿತ್ತು. ಆದರೆ ಸಂಸಾರ ಸಾಗಿಸಲು ಇಚ್ಛೆಯಿಲ್ಲದೆ ಇಬ್ಬರೂ ನ್ಯಾಯಾಲಯದ ಮೆಟ್ಟಿಲೇರಿ ತಮ್ಮ ಪತಿಯಂದಿರಿಗೆ ಡೈವೋರ್ಸ್ ನೀಡಿ ಬಳಿಕ ವಕೀಲರ ನೆರವಿನಿಂದ ಪರಸ್ಪರ ವಿವಾಹವಾಗಿದ್ದಾರೆ. ಇದೀಗ ಇವರ ವಿವಾಹಕ್ಕೆ ಕಾನೂನಿನ ಮಾನ್ಯತೆ ದೊರಕಿಸಿಕೊಡಲು ಕೋರ್ಟಿನಲ್ಲಿ ಅರ್ಜಿ ದಾಖಲಿಸುವುದಾಗಿ ವಕೀಲರು ತಿಳಿಸಿದ್ದಾರೆ.
ಡೈವೋರ್ಸ್ ಪಡೆದಿದ್ದರೂ ತಮ್ಮ ಮಾಜಿ ಪತಿಯಂದಿರಿಂದ ಯಾವುದೇ ಹಣ ಅಥವಾ ಆಸ್ತಿಯನ್ನು ತಾವು ಕೇಳುವುದಿಲ್ಲ. ಸಲಿಂಗಕಾಮಕ್ಕೆ ಸುಪ್ರೀಂಕೋರ್ಟ್ ಅನುಮೋದನೆ ದೊರೆತಿರುವ ಕಾರಣ ಯಾವುದೇ ಭಯವಿಲ್ಲದೆ ತಾವಿಬ್ಬರು ಒಟ್ಟಿಗೇ ಬದುಕುವುದಾಗಿ ಮಹಿಳೆಯರು ತಿಳಿಸಿದ್ದಾರೆ. ಸಲಿಂಗಿ ಮಹಿಳೆಯರ ವಿವಾಹಕ್ಕೆ ಭಾರತೀಯ ಸಮಾಜದಲ್ಲಿ ಒಪ್ಪಿಗೆಯಿಲ್ಲ. ಈ ಕಾರಣದಿಂದ 1995ರಿಂದ 2003ರ ವರೆಗಿನ ಅವಧಿಯಲ್ಲಿ ಕೇರಳದ 22 ಯುವತಿಯರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾನೂನಿನ ಮಾನ್ಯತೆ ಇಲ್ಲದಿದ್ದರೂ ಇಬ್ಬರು ಮಹಿಳೆಯರು ಪರಸ್ಪರ ಮದುವೆಯಾದ ಘಟನೆ ಈ ಹಿಂದೆಯೂ ನಡೆದಿದೆ. 1987ರಲ್ಲಿ ಭೋಪಾಲದ ಇಬ್ಬರು ಮಹಿಳಾ ಪೊಲೀಸರಾದ ಲೀಲಾ ಮತ್ತು ಉರ್ಮಿಳಾ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ಬಳಿಕ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು.