ಲಿಂಗ ಸಮಾನತೆಗಾಗಿ ಕೇರಳದಲ್ಲಿ 620 ಕಿ.ಮೀ. ಉದ್ದದ ‘ಮಹಿಳಾ ಗೋಡೆ’
ಲಕ್ಷಾಂತರ ಮಂದಿ ಭಾಗಿ
#ಕಾಞಂಗಾಂಡ್ನಲ್ಲಿ ಘರ್ಷಣೆ, ಪಾಲಕ್ಕಾಡಿನಲ್ಲಿ ಬಸ್ಸಿಗೆ ಕಲ್ಲೆಸೆತ
ತಿರುವನಂತಪುರ, ಜ.1: ಪುನರುತ್ಥಾನ ಮೌಲ್ಯ ಎತ್ತಿ ಹಿಡಿಯಲು ಹಾಗೂ ಲಿಂಗ ಸಮಾನತೆ ಪ್ರತಿಪಾದಿಸುವ ಉದ್ದೇಶದಿಂದ ಲಕ್ಷಾಂತರ ಮಹಿಳೆಯರು ಮಂಗಳವಾರ ಉತ್ತರದ ಕಾಸರಗೋಡಿನಿಂದ ದಕ್ಷಿಣದ ತಿರುವನಂತಪುರದಲ್ಲಿರುವ ರಾಜ್ಯಪಾಲರ ನಿವಾಸ ಸಮೀಪದ ಅಯ್ಯಂಕಾಳಿ ವೃತ್ತದವರೆಗೆ 620 ಕಿಲೋ ಮೀಟರ್ ಉದ್ದದ ‘ಮಹಿಳಾ ಗೋಡೆ’ ರಚಿಸಿದರು.
ಈ ‘ಮಹಿಳಾ ಗೋಡೆ’ಯಲ್ಲಿ ಎಲ್ಲ ವಯೋಮಾನದ ಮಹಿಳೆಯರು ಪಾಲ್ಗೊಂಡಿದ್ದು, ಸಂಜೆ ಸುಮಾರು 4 ಗಂಟೆಗೆ ಪ್ರತಿಜ್ಞೆ ಕೈಗೊಂಡರು. ಈ ‘ಮಹಿಳಾ ಗೋಡೆ’ಯ ಉತ್ತರ ತುದಿಯಲ್ಲಿ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ನಿಂತಿದ್ದರೆ, ದಕ್ಷಿಣದ ತುಂದಿಯಲ್ಲಿ ಸಿಪಿಎಂನ ಪಾಲಿಟ್ ಬ್ಯೂರೊ ಸದಸ್ಯೆ ಬೃಂದಾ ಕಾರಟ್ ನಿಂತಿದ್ದರು.
‘ಮಹಿಳಾ ಗೋಡೆ’ ನಂತರ ಇಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಬೃಂದಾ ಕಾರಟ್, ‘ಮಹಿಳೆಯರ ಗೋಡೆ’ ಮೂಲಕ ಇತಿಹಾಸ ನಿರ್ಮಿಸಿರುವುದಕ್ಕೆ ಮಹಿಳೆಯರನ್ನು ಅಭಿನಂದಿಸಿದರು. ಈ ಗೋಡೆ ಕೇರಳಕ್ಕೆ ಮಾತ್ರ ಸೀಮಿತವಲ್ಲ, ಇದು ದೇಶದ ಎಲ್ಲ ಮಹಿಳೆಯರಿಗೆ ಅನ್ವಯ ಎಂದು ಅವರು ಹೇಳಿದರು.
ಕೆ.ಕೆ. ಶೈಲಜಾ ಮಾತನಾಡಿ, ಈ ಗೋಡೆಯ ಕುರಿತು ಘೋಷಿಸಿದ ಕೆಲವು ದಿನಗಳ ಬಳಿಕ ಮಹಿಳೆಯರಿಂದ ಹಲವು ಫೋನ್ ಕರೆಗಳು ಬಂದಿವೆ. ನಾವು ಎಲ್ಲಿ ನಿಲ್ಲಬೇಕು ಎಂದು ಅವರು ಕೇಳುತ್ತಿದ್ದರು. ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ದೊಡ್ಡ ಯಶಸ್ಸು ಎಂದಿದ್ದಾರೆ. ಈ ‘ಮಹಿಳಾ ಗೋಡೆ’ಯಲ್ಲಿ ಚಿತ್ರೋದ್ಯಮಿಗಳು, ಲೇಖಕರು ಹಾಗೂ ಶಿಕ್ಷಣ ತಜ್ಞರು ಸೇರಿದಂತೆ ಹಲವು ಕ್ಷೇತ್ರಗಳ ಮಹಿಳೆಯರು ಪಾಲ್ಗೊಂಡಿದ್ದರು.
ಬೆಂಬಲ-ವಿರೋಧ
‘ಮಹಿಳಾ ಗೋಡೆ’ಯ ಬಗ್ಗೆ ಕಾಂಗ್ರೆಸ್ ಟೀಕೆ ವ್ಯಕ್ತಪಡಿಸಿದೆ. ಇದು ಕೇವಲ ಕೋಮು ಭಾವನೆ ಪ್ರಚೋದಿಸುವ ಕಾರ್ಯ ಎಂದು ಅದು ಹೇಳಿದೆ. ಹಿಂದೂ ನಾಯರ್ ಸಮುದಾಯವನ್ನು ಪ್ರತಿನಿಧಿಸುವ ನಾಯರ್ ಸರ್ವಿಸ್ ಸೊಸೈಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ. ಹಿಂದೂ ಈಳವ ಸಮುದಾಯದ ಸಾಮಾಜಿಕ ಹೋರಾಟ ಸಂಘಟನೆ ಎಸ್ ಎನ್ ಡಿಪಿ ಯೋಗಂನ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ.
ಕಾಞಂಗಾಂಡ್ನಲ್ಲಿ ಘರ್ಷಣೆ
ಇಲ್ಲಿನ ಚೇಟುಕುಂಡು ಎಂಬಲ್ಲಿ ರಸ್ತೆ ಬದಿಯಿಂದ ಹೊಗೆ ಏಳುತ್ತಿತ್ತು. ಇದರಿಂದ ಮಹಿಳೆಯರು ಆತಂಕಗೊಂಡರು. ಅನಂತರ ಕೆಲವು ದುಷ್ಕರ್ಮಿಗಳು ಕಲ್ಲೆಸೆದಿದ್ದು, ಈ ಸಂದರ್ಭ ಸಿಪಿಎಂ ಹಾಗೂ ಆರೆಸ್ಸೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿತು.
ಪಾಲಕ್ಕಾಡಿನಲ್ಲಿ ಬಸ್ಸಿಗೆ ಕಲ್ಲೆಸೆತ
ಪಾಲಕ್ಕಾಡ್ನ ಮದಲಮಾಡದಲ್ಲಿ ಮಹಿಳೆಯರು ಆಗಮಿಸಿದ ಬಸ್ ಮೇಲೆ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ. ಇದರಿಂದ ಬಸ್ ನ ಕಿಟಕಿ ಗಾಜುಗಳು ಒಡೆದಿವೆ. ಈ ಸಂದರ್ಭ ಬಸ್ ಚಾಲಕ ಹಾಗೂ ನಿರ್ವಾಹಕ ಮಲಗಿದ್ದರು.
ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್ಎನ್ ಡಿಪಿ) ಹಾಗೂ ಕೇರಳ ಪುಲಯಾರ್ ಮಹಾ ಸಭಾ (ಕೆಪಿಎಂಎಸ್) ಸೇರಿದಂತೆ 176 ಸಾಮಾಜಿಕ ಹಾಗೂ ರಾಜಕೀಯ ಸಂಘಟನೆಗಳೊಂದಿಗೆ ಸೇರಿ ಆಡಳಿತಾರೂಢ ಸಿಪಿಎಂ ಈ ‘ಮಹಿಳಾ ಗೋಡೆ’ಯನ್ನು ಆಯೋಜಿಸಿತ್ತು.
ಸರಕಾರದ ಕಾರ್ಯಕ್ರಮ ಅಲ್ಲ?
ಪ್ರಸ್ತಾಪಿತ ‘ಮಹಿಳಾ ಗೋಡೆಗೆ’ ಎಲ್ಲ ರೀತಿಯ ಬೆಂಬಲ ನೀಡಲಾಗುವುದು ಎಂದು ಆರಂಭದಲ್ಲಿ ರಾಜ್ಯ ಸರಕಾರ ಪ್ರತಿಪಾದಿಸಿತ್ತು. ವಿವಾದ ಆರಂಭವಾದ ಬಳಿಕ ಬೆಂಬಲ ಹಾಗೂ ನಿಧಿ ನೀಡಿರುವುದನ್ನು ಹಿಂದೆ ತೆಗೆದುಕೊಂಡಿತು. ಈ ‘ಮಹಿಳಾ ಗೋಡೆ’ಯನ್ನು ಆಯೋಜಿಸಿರುವುದು ಸರಕಾರ ಅಲ್ಲ ಎಂದು ಸಿಪಿಎಂನ ರಾಜ್ಯ ಕಾರ್ಯದರ್ಶಿ ಕೋಡಿಯೇರಿ ಬಾಲಕೃಷ್ಣನ್ ಹೇಳಿದ್ದಾರೆ.
ಲಂಡನ್ನಿಂದಲೂ ಬೆಂಬಲ
‘ಮಹಿಳಾ ಗೋಡೆ’ಯನ್ನು ಬೆಂಬಲಿಸಿ ಲಂಡನ್ ನಲ್ಲೂ ಮಾನವ ಸರಪಳಿ ರಚಿಸಲಾಯಿತು. ಕೇಂದ್ರ ಲಂಡನ್ ನ ಹೈಕಮಿಷನ್ ಆಫ್ ಇಂಡಿಯಾದ ಎದುರು ಸೋಮವಾರ ನಡೆದ ಈ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಪಾಲ್ಗೊಂಡರು. ಎಡಪಂಥೀಯ ಸಂಘಟನೆಗಳು, ಲೇಖಕರು ಹಾಗೂ ಕೇರಳೀಯ ಕಾರ್ಮಿಕ ಸಂಘಟನೆಯ ಕಾರ್ಯಕರ್ತರು ಇಂಗ್ಲೆಂಡ್ನಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದರು.
ಶಾಲೆಗಳಿಗೆ ರಜೆ
ಉದ್ಯೋಗಿಗಳು ಹಾಗೂ ಅಧ್ಯಾಪಕಿಯರು ‘ಮಹಿಳಾ ಗೋಡೆ’ಯಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಸರಕಾರಿ ಕಚೇರಿ ಹಾಗೂ ಶಾಲೆಗಳ ಕಾರ್ಯ ನಿರ್ವಹಣೆಗೆ ಅಡ್ಡಿ ಉಂಟಾಯಿತು. ಕೋಝಿಕ್ಕೋಡ್, ಇಡುಕ್ಕಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ಅಪರಾಹ್ನ ರಜೆ ಸಾರಲಾಗಿತ್ತು. ಸರಕಾರಿ ಕಚೇರಿಗಳಲ್ಲಿ ಮಹಿಳೆಯರಿಗೆ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು.