ರಫೇಲ್ ಒಪ್ಪಂದ ತೀರ್ಪು ಮರುಪರಿಶೀಲನೆ ಕೋರಿ ಯಶವಂತ್ ಸಿನ್ಹಾ, ಅರುಣ್ ಶೌರಿ ಅರ್ಜಿ
ಹೊಸದಿಲ್ಲಿ, ಜ.2: ರಫೇಲ್ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸರಕಾರಕ್ಕೆ ಕ್ಲೀನ್ಚಿಟ್ ನೀಡಿದ ಸುಪ್ರೀಂಕೋರ್ಟ್ನ ತೀರ್ಪಿನ ಮರು ಪರಿಶೀಲನೆಗೆ ಕೋರಿ ಮಾಜಿ ಸಚಿವರಾದ ಯಶವಂತ್ ಸಿನ್ಹಾ ಹಾಗೂ ಅರುಣ್ ಶೌರಿ ಅವರು ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರೊಂದಿಗೆ ಅರ್ಜಿ ಸಲ್ಲಿಸಿದ್ದಾರೆ.
ಡಿ.14 ರಂದು ನೀಡಿದ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ ಕೇಂದ್ರಕ್ಕೆ ಕ್ಲೀನ್ಚಿಟ್ ನೀಡಿತ್ತು. ರಫೇಲ್ ಯುದ್ದ ವಿಮಾನ ಖರೀದಿ ಪ್ರಕ್ರಿಯೆಯಲ್ಲಿ ನಡೆದ ಕೆಲವು ನಿರ್ಧಾರಗಳ ಬಗ್ಗೆ ಸಂಶಯ ಪಡುವ ಅಗತ್ಯವಿಲ್ಲ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿತ್ತು.
ತೆರೆದ ನ್ಯಾಯಾಲಯದಲ್ಲಿ ಮೌಖಿಕ ವಿಚಾರಣೆಗೆ ಅವಕಾಶ ನೀಡಬೇಕೆಂದು ಸಿನ್ಹಾ, ಶೌರಿ ಹಾಗೂ ಭೂಷಣ್ ತಮ್ಮ ಪುನರ್ಪರಿಶೀಲನಾ ಅರ್ಜಿಯಲ್ಲಿ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಪಕ್ಷ ರಫೇಲ್ ಯುದ್ದ ವಿಮಾನ ಖರೀದಿ ಒಪ್ಪಂದದಲ್ಲಿ 59,000 ಕೋ.ರೂ. ಭ್ರಷ್ಟಾಚಾರ ನಡೆದಿದೆ ಎಂದು ಗಂಭೀರ ಆರೋಪ ಮಾಡುತ್ತಾ ಬಂದಿದೆ. ರಫೇಲ್ ಒಪ್ಪಂದದ ತನಿಖೆಗೆ ಆದೇಶಿಸಲು ನಿರಾಕರಿಸಿದ ಸುಪ್ರೀಂಕೋರ್ಟ್, ತನಿಖೆಗೆ ಆಗ್ರಹಿಸಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿತ್ತು.