ಕೌರವರು ಟೆಸ್ಟ್ ಟ್ಯೂಬ್ ಬೇಬಿಗಳು ಎಂದ ವಿವಿ ಉಪಕುಲಪತಿ !
ಜಲಂಧರ್, ಜ.5: “ಸಾವಿರಾರು ವರ್ಷಗಳ ಹಿಂದೆ ನಮ್ಮಲ್ಲಿ ಸ್ಟೆಮ್ ಸೆಲ್ ಸಂಶೋಧನೆ ಹಾಗೂ ಟೆಸ್ಟ್ ಟ್ಯೂಬ್ ಬೇಬಿ ತಂತ್ರಜ್ಞಾನದಿಂದ ನೂರಾರು ಕೌರವರು ಒಂದೇ ತಾಯಿಯಿಂದ ಹುಟ್ಟಿದ್ದರು. ಇದು ಈ ದೇಶದಲ್ಲಿನ ವಿಜ್ಞಾನವಾಗಿತ್ತು'' ಎಂದು ಆಂಧ್ರ ವಿಶ್ವವಿದ್ಯಾಲಯದ ಉಪಕುಲಪತಿ ಜಿ. ನಾಗೇಶ್ವರ್ ರಾವ್ ಶುಕ್ರವಾರ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡುತ್ತಾ ಹೇಳಿದ್ದಾರೆ.
“ಮಹಾಭಾರತದಲ್ಲಿ ಹೇಳಿದಂತೆ 100 ಭ್ರೂಣಗಳನ್ನು 100 ಮಣ್ಣಿನ ಮಡಕೆಗಳಲ್ಲಿಡಲಾಗಿತ್ತು. ಇವು ಟೆಸ್ಟ್ ಟ್ಯೂಬ್ ಬೇಬಿಗಳಲ್ಲವೇ?, ಸ್ಟೆಮ್ ಸೆಲ್ ಸಂಶೋಧನೆ ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದೆಯೂ ಇತ್ತು” ಎಂದು ಅವರು ಹೇಳಿಕೊಂಡಿದ್ದಾರೆ.
“ಶ್ರೀರಾಮನು ನಿರ್ದಿಷ್ಟ ಗುರಿಗಳತ್ತ ತಲುಪಿ ಮತ್ತೆ ವಾಪಸಾಗುತ್ತಿದ್ದ ಅಸ್ತ್ರಗಳು ಮತ್ತು ಶಸ್ತ್ರಗಳನ್ನು ಬಳಸುತ್ತಿದ್ದ. ಸಾವಿರಾರು ವರ್ಷಗಳ ಹಿಂದೆಯೂ ನಿರ್ದೇಶಿತ ಕ್ಷಿಪಣಿ (ಗೈಡೆಡ್ ಮಿಸ್ಸೈಲ್) ತಂತ್ರಜ್ಞಾನ ಭಾರತದಲ್ಲಿತ್ತು ಎಂಬುದಕ್ಕೆ ಇದು ಸಾಕ್ಷಿಯಾಗಿದೆ,'' ಎಂದರು.
ರಾವಣನ ಬಳಿ 24 ವಿಧದ ವಿವಿಧ ಗಾತ್ರ ಹಾಗೂ ಸಾಮರ್ಥ್ಯದ ಹಾಗೂ ವಿವಿಧ ಉದ್ದೇಶಗಳಿಗೆ ಬಳಕೆಯಾಗುವಂತಹ ಯುದ್ಧ ವಿಮಾನಗಳಿದ್ದವು. ಆತನ ಬಳಿ ಲಂಕೆಯಲ್ಲಿ ಹಲವಾರು ವಿಮಾನ ನಿಲ್ದಾಣಗಳೂ ಇದ್ದವು,'' ಎಂದು ನಾಗೇಶ್ವರ ರಾವ್ ಹೇಳಿದರು.