ಮಹಾರಾಷ್ಟ್ರದಲ್ಲಿ ತಲಾ 20 ಕ್ಷೇತ್ರಗಳಲ್ಲಿ ಎನ್ಸಿಪಿ, ಕಾಂಗ್ರೆಸ್ ಸ್ಪರ್ಧೆ?
ಲೋಕಸಭಾ ಚುನಾವಣೆ
ಮುಂಬೈ, ಜ.5: ಈ ವರ್ಷ ನಡೆಯಲಿರುವ 2019ರ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ(ಎನ್ಸಿಪಿ)ಹಾಗೂ ಕಾಂಗ್ರೆಸ್ ತಲಾ 20 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ.
ಶುಕ್ರವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎನ್ಸಿಪಿ ಮುಖಂಡ ಪ್ರಫುಲ್ ಪಟೇಲ್,‘‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ ಒಟ್ಟು 48 ಲೋಕಸಭಾ ಸೀಟುಗಳ ಪೈಕಿ ಎನ್ಸಿಪಿ ಹಾಗೂ ಕಾಂಗ್ರೆಸ್ ತಲಾ 20 ಸೀಟುಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಉಳಿದ ಎಂಟು ಸೀಟುಗಳನ್ನು ಮೈತ್ರಿಪಕ್ಷಗಳಿಗೆ ನೀಡಲಾಗುವುದು’’ ಎಂದರು.
‘‘2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆಯನ್ನು ಮಣಿಸುವುದು ಮೈತ್ರಿಪಕ್ಷದ ಮುಖ್ಯ ಉದ್ದೇಶವಾಗಿದೆ’’ ಎಂದು ಪಟೇಲ್ ಹೇಳಿದ್ದಾರೆ.
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮಹಾಘಟಬಂಧನದಲ್ಲಿ ಮುಖ್ಯ ಪಾತ್ರವಹಿಸಲಿದ್ದು, ಅಗತ್ಯವಿದ್ದಾಗ ಪ್ರಚಾರಸಭೆಗಳಲ್ಲಿ ಭಾಗವಹಿಸಲಿದ್ದಾರೆ ಎಂದ ಪಟೇಲ್, ಮಹಾರಾಷ್ಟ್ರ ನವ ನಿರ್ಮಾಣ ಸೇನೆ(ಎಂಎನ್ಎಸ್)ನೊಂದಿಗೆ ಮೈತ್ರಿ ಒಪ್ಪಂದ ಸಾಧ್ಯತೆಯನ್ನು ತಳ್ಳಿ ಹಾಕಿದರು.
2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮಹಾರಾಷ್ಟ್ರದ 27 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಎನ್ಸಿಪಿ 21 ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು.