200 ರೈಲ್ವೆ ಸ್ಟೇಷನ್ಗಳಿಗೆ ವಿಮಾನ ನಿಲ್ದಾಣ ಮಾದರಿ ಭದ್ರತೆ
![200 ರೈಲ್ವೆ ಸ್ಟೇಷನ್ಗಳಿಗೆ ವಿಮಾನ ನಿಲ್ದಾಣ ಮಾದರಿ ಭದ್ರತೆ 200 ರೈಲ್ವೆ ಸ್ಟೇಷನ್ಗಳಿಗೆ ವಿಮಾನ ನಿಲ್ದಾಣ ಮಾದರಿ ಭದ್ರತೆ](https://www.varthabharati.in/sites/default/files/images/articles/2019/01/7/171627.jpeg)
ಹೊಸದಿಲ್ಲಿ, ಜ. 7: ದೇಶದ 200 ಪ್ರಮುಖ ರೈಲ್ವೆಸ್ಟೇಷನ್ಗಳಿಗೆ ವಿಮಾನ ನಿಲ್ದಾಣ ಮಾದರಿಯ ಭದ್ರತಾ ವ್ಯವಸ್ಥೆ ಕಲ್ಪಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.
ಇದರ ಅನ್ವಯ ಪ್ರಯಾಣಿಕರು ಹಾಗೂ ಸಂದರ್ಶಕರು ಪ್ಲಾಟ್ಫಾರಂಗೆ ತೆರಳುವ ಮುನ್ನ ಭದ್ರತಾ ತಪಾಸಣೆಗೆ ಒಳಗಾಗಬೇಕಾಗುತ್ತದೆ. ಈ ಹೊಸ ಭದ್ರತಾ ವ್ಯವಸ್ಥೆ ಮೊದಲ ಬಾರಿಗೆ ಉತ್ತರ ಪ್ರದೇಶದ ಅಲಹಾಬಾದ್ ಮತ್ತು ಕರ್ನಾಟಕದ ಹುಬ್ಬಳ್ಳಿ ನಿಲ್ದಾಣಗಳಲ್ಲಿ ಜಾರಿಗೆ ಬರಲಿದೆ.
"ನಾವು ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಿಕೊಳ್ಳಲಿದ್ದೇವೆ. ಸೂಕ್ತ ನಿಗಾ ವಹಿಸುವ ಸಲುವಾಗಿ ಸೀಮಿತ ಅಗಮನ ಮತ್ತು ನಿರ್ಗಮನ ದ್ವಾರಗಳಿರುತ್ತವೆ. ಲಗೇಜ್ ಸ್ಕ್ಯಾನಿಂಗ್ನಂಥ ತಪಾಸಣೆಗಳು ಇರುವುದರಿಂದ ರೈಲು ನಿಲ್ದಾಣಗಳಿಗೆ ಸಾಕಷ್ಟು ಮುಂಚಿತವಾಗಿಯೇ ಆಗಮಿಸುವಂತೆ ಜನರಿಗೆ ಸಲಹೆ ಮಾಡುತ್ತಿದ್ದೇವೆ. ಆದರೆ ವಿಮಾನ ನಿಲ್ದಾಣಗಳಂತೆ, ರೈಲ್ವೆ ಪ್ಲಾಟ್ಫಾರಂ ಪ್ರವೇಶಿಸಲು ಯಾವುದೇ ಗಡುವು ಇರುವುದಿಲ್ಲ" ಎಂದು ರೈಲ್ವೆ ಸುರಕ್ಷಾ ಪಡೆಯ ಮಹಾ ನಿರ್ದೇಶಕ ಅರುಣ್ ಕುಮಾರ್ ತಿಳಿಸಿದ್ದಾರೆ.
ಹೊಸ ಭದ್ರತಾ ವ್ಯವಸ್ಥೆಯಲ್ಲಿ ರಿಯಲ್ ಟೈಮ್ ಫೇಸ್ ರೆಕೊಗ್ನಿಶನ್ ಸಾಫ್ಟ್ವೇರ್ ಇರಲಿದ್ದು, ಇದು ಆರ್ಪಿಎಫ್ ಕಮಾಂಡ್ ಕೇಂದ್ರದಲ್ಲಿ ಪೂರ್ವಾಪರಾಧಿಗಳ ಬಗ್ಗೆ ಮಾಹಿತಿ ನೀಡಲಿದೆ. ರ್ಯಾಂಡಮ್ ಚೆಕ್ಕಿಂಗ್ ವಿಧಾನವು ಪ್ರಯಾಣಿಕರ ಮೇಲೆ ಮಾನಸಿಕ ಪರಿಣಾಮವನ್ನೂ ಬೀರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಶನಿವಾರ ಕುಮಾರ್ ಅವರು ಭದ್ರತಾ ಸಿದ್ಧತೆಗಳ ಪರಿಶೀಲನೆ ನಡೆಸಿದರು. ಅಲಹಾಬಾದ್ನಲ್ಲಿ ಕುಂಭಮೇಳ ವೇಳೆ ದೊಡ್ಡ ಸಂಖ್ಯೆಯ ಪ್ರಯಾಣಿಕರು ಆಗಮಿಸುವುದರಿಂದ ಆಗಮನ ಹಾಗೂ ನಿರ್ಗಮನ ದ್ವಾರಗಳಲ್ಲಿ ಭದ್ರತಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.