ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳಿದ ಪಾದ್ರಿಗೆ 30 ವರ್ಷ ಜೈಲು
ಚೆನ್ನೈ, ಜ. 8: ಅಪ್ರಾಪ್ತ ವಯಸ್ಸಿನ ಇಬ್ಬರು ಬಾಲಕಿಯರನ್ನು ಅಪಹರಿಸಿ, ಅತ್ಯಾಚಾರ ಎಸಗಿ, ವೇಶ್ಯಾವಾಟಿಕೆಗೆ ತಳ್ಳಿದ ಆರೋಪದಲ್ಲಿ ಕ್ರೈಸ್ತ ಪಾದ್ರಿಯೊಬ್ಬರಿಗೆ 30 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತಮಿಳುನಾಡಿನ ಕುಡಲೂರು ಮಹಿಳಾ ನ್ಯಾಯಾಲಯ ತೀರ್ಪು ನೀಡಿದೆ.
ಪ್ರಕರಣದಲ್ಲಿ ಷಾಮೀಲಾದ ಎಂಟು ಮಂದಿ ಮಹಿಳೆಯರೂ ಸೇರಿದಂತೆ ಇತರ 15 ಮಂದಿಗೂ ಶಿಕ್ಷೆ ವಿಧಿಸಲಾಗಿದೆ.
ಕುಡಲೂರು ಜಿಲ್ಲೆ ವಿರಿದ್ದಾಚಲಮ್ನ ಚರ್ಚ್ ಆಫ್ ಸೌತ್ ಇಂಡಿಯಾದ ಪಾದ್ರಿ ಅರೋಲ್ದಾಸ್ (60)ಗೆ 5 ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. 2014ರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ಒಂಬತ್ತು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಪ್ರಕರಣದ ಒಟ್ಟು 17 ಮಂದಿ ಆರೋಪಿಗಳ ಪೈಕಿ 16 ಮಂದಿಯನ್ನು ತಪ್ಪಿತಸ್ಥರೆಂದು ಘೋಷಿಸಿ ನ್ಯಾಯಾಧೀಶ ಟಿ.ಲಿಂಗೇಶ್ವರನ್ ತೀರ್ಪು ನೀಡಿದ್ದಾರೆ.
ತಿಟ್ಟಗುಡಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 13 ವರ್ಷದ ವಿದ್ಯಾರ್ಥಿನಿ ಹೋಟೆಲ್ಗೆ ಬಂದಿದ್ದಾಗ ಆಕೆಯನ್ನು ನೋಡಿದ ತಮಿರಳಸಿ (40) ಎಂಬ ಮಹಿಳೆ ಆಕೆಯನ್ನು ಹಿಡಿದು ತನ್ನ ಪತಿ ಹಾಗೂ ವೇಶ್ಯಾವಾಟಿಕೆಯ ದಲ್ಲಾಳಿಯಿಂದ ಅತ್ಯಾಚಾರ ಮಾಡಿಸಿದಳು ಎಂದು ಅಭಿಯೋಜಕರು ವಾದಿಸಿದ್ದರು.
ಬಳಿಕ ಬಾಲಕಿಯನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳಲಾಗಿತ್ತು. ಬಾಲಕಿ ತನ್ನನ್ನು ಬಿಡುಗಡೆ ಮಾಡುವಂತೆ ಕೇಳಿದಾಗ ಬೇರೊಬ್ಬ ಬಾಲಕಿಯನ್ನು ಕರೆತಂದರೆ ಬಿಡುಗಡೆ ಮಾಡುವುದಾಗಿ ನಂಬಿಸಿದ್ದರು. ಇದನ್ನು ನಂಬಿದ ಬಾಲಕಿ ತನ್ನ ಸಹಪಾಠಿಯೊಬ್ಬಳನ್ನು ಕರೆತಂದಿದ್ದಳು. ಆದರೆ ಹಲವು ಮಂದಿ ವಿವಿಧೆಡೆಗೆ ಕರೆದೊಯ್ದು ಇವರಿಬ್ಬರ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದವರಲ್ಲಿ ಪಾದ್ರಿ ಅರುಲ್ ದಾಸ್ ಕೂಡಾ ಸೇರಿದ್ದ.