77 ದಿನಗಳ ಬಳಿಕ ಕಚೇರಿಗೆ ವಾಪಸಾದ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ
ಹೊಸದಿಲ್ಲಿ, ಜ.9: ಕಳೆದ ವರ್ಷದ ಅಕ್ಟೋಬರ್ 23ರ ಮಧ್ಯರಾತ್ರಿ ಕೇಂದ್ರ ಸರಕಾರದಿಂದ ಕಡ್ಡಾಯ ರಜೆ ಮೇಲೆ ಕಳುಹಿಸಲ್ಪಟ್ಟಿದ್ದ ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ವರ್ಮಾ 77 ದಿನಗಳ ಬಳಿಕ ತಮ್ಮ ಕಚೇರಿಗೆ ಬುಧವಾರ ಹಾಜರಾಗಿದ್ದಾರೆ.
ಸುಪ್ರೀಂಕೋರ್ಟ್ ಮಂಗಳವಾರ ನೀಡಿದ್ದ ಮಹತ್ವದ ಆದೇಶದಲ್ಲಿ ಕಡ್ಡಾಯ ರಜೆ ಮೇಲೆ ಸಿಬಿಐ ನಿರ್ದೇಶಕರನ್ನು ಕಳುಹಿಸಿದ್ದ ಕೇಂದ್ರ ಸರಕಾರದ ಆದೇಶವನ್ನು ವಜಾಗೊಳಿಸಿತ್ತು. ವರ್ಮಾ ಮತ್ತೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿತ್ತು.
ಸಿಬಿಐನ ಇಬ್ಬರು ಉನ್ನತ ಅಧಿಕಾರಿಗಳ ನಡುವೆ ಆರೋಪ-ಪ್ರತ್ಯಾರೋಪ ಕಂಡುಬಂದ ಕಾರಣ ಅನಿವಾರ್ಯವಾಗಿ ಸಿಬಿಐ ನಿರ್ದೇಶಕರ ವರ್ಮಾ ಹಾಗೂ ಉಪ ವಿಶೇಷ ನಿರ್ದೇಶಕರಾದ ರಾಕೇಶ್ ಅಸ್ತಾನಾರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿತ್ತು ಎಂದು ಕೇಂದ್ರ ಸರಕಾರ ಸಮರ್ಥಿಸಿಕೊಂಡಿತ್ತು. ಆದರೆ, ಸುಪ್ರೀಂಕೋರ್ಟ್ ಮಂಗಳವಾರ ನಡೆದ ವಿಚಾರಣೆ ವೇಳೆ ಕೇಂದ್ರ ಸರಕಾರದ ವಾದವನ್ನು ತಿರಸ್ಕರಿಸಿತ್ತು.
ತನ್ನನ್ನು ರಜೆ ಮೇಲೆ ಕಳುಹಿಸಿದ್ದ ಕೇಂದ್ರದ ನಿರ್ಧಾರದ ವಿರುದ್ಧ ವರ್ಮಾ ಸುಪ್ರೀಂಕೋರ್ಟ್ನ ಮೊರೆ ಹೋಗಿದ್ದರು. ಆಗ ಸರಕಾರದಿಂದ ಹೆಚ್ಚುವರಿ ನಿರ್ದೇಶಕರಾಗಿ ಭಡ್ತಿ ಪಡೆದಿದ್ದ ಜಂಟಿ ನಿರ್ದೇಶಕ ಎಂ.ನಾಗೇಶ್ವರ ರಾವ್ ಅವರಿಗೆ ಪ್ರಮುಖ ನಿರ್ಧಾರ ಕೈಗೊಳ್ಳದಂತೆಯೂ ನ್ಯಾಯಾಲಯ ಆದೇಶಿಸಿತ್ತು.