ವಿವಾದ ಹಿನ್ನೆಲೆ: ಸರಕಾರದ ಕೊಡುಗೆಯನ್ನು ನಿರಾಕರಿಸಿದ ನ್ಯಾಯಮೂರ್ತಿ ಎ.ಕೆ. ಸಿಕ್ರಿ
ಹೊಸದಿಲ್ಲಿ,ಜ.13: ಲಂಡನ್ನಲ್ಲಿ ಕಾಮನ್ವೆಲ್ತ್ ಕಾರ್ಯಾಲಯ ಮಧ್ಯಸ್ಥಿಕೆ ಮಂಡಳಿ (ಸಿಎಸ್ಎಟಿ)ಗೆ ನಾಮಾಂಕಣಗೊಳಿಸುವ ಕೇಂದ್ರ ಸರಕಾರದ ಕೊಡುಗೆಯನ್ನು ನ್ಯಾಯಮೂರ್ತಿ ಎ.ಕೆ ಸಿಕ್ರಿ ತಿರಸ್ಕರಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಎರಡನೇ ಹಿರಿಯ ನ್ಯಾಯಾಧೀಶರಾಗಿರುವ ಸಿಕ್ರಿಯವರನ್ನು ಕಳೆದ ವಾರ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ, ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಹುದ್ದೆಗೆ ಮರುನೇಮಕದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ರಚಿಸಲಾಗಿದ್ದ ತ್ರಿಸದಸ್ಯ ಉನ್ನತ ಪೀಠದ ಓರ್ವ ಸದಸ್ಯರಾಗಿ ನೇಮಕ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿಕ್ರಿ ಸದಸ್ಯ ರಾಗಿದ್ದ ಈ ಪೀಠವು ಅಲೋಕ್ ವರ್ಮಾರನ್ನು ಸಿಬಿಐ ನಿರ್ದೇಶಕ ಹುದ್ದೆಯಿಂದ ವಜಾಗೊಳಿಸಿತ್ತು. ಈ ನಿರ್ಧಾರಕ್ಕೆ ನ್ಯಾಯಾಧೀಶ ಸಿಕ್ರಿ ಪ್ರಧಾನಿ ಮೋದಿ ಜೊತೆ ಕೈಜೋಡಿಸಿದ್ದರು ಎಂಬ ಆರೋಪಗಳು ಕೇಳಿಬಂದಿದ್ದವು.
ಸಿಎಸ್ಎಟಿಗೆ ಸಿಕ್ರಿ ಸದಸ್ಯರಾಗಿ ಆಯ್ಕೆಯಾಗಿರುವುದನ್ನು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಇದೀಗ ಅವರು ಈ ಬಗ್ಗೆ ರವಿವಾರ ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿದ್ದು ಈ ಕೊಡುಗೆಯನ್ನು ತಿರಸ್ಕರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಕಳೆದ ವರ್ಷ ಡಿಸೆಂಬರ್ನ ಮೊದಲ ವಾರದಲ್ಲಿ ನ್ಯಾಯಮೂರ್ತಿ ಸಿಕ್ರಿಯನ್ನು ಸಂಪರ್ಕಿಸಿದ್ದ ಸರಕಾರ ಸಿಎಸ್ಎಟಿಗೆ ನಾಮಾಂಕಣಗೊಳಿಸುವ ಬಗ್ಗೆ ತಿಳಿಸಿ ಅವರಿಂದ ಒಪ್ಪಿಗೆ ಪಡೆದುಕೊಂಡಿತ್ತು.
ಸಿಎಸ್ಟಿಯ ಎಂಟು ಸದಸ್ಯರ ಮಂಡಳಿಗೆ ನಾಲ್ಕು ವರ್ಷಗಳ ಅವಧಿಗೆ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಈ ಅವಧಿಯನ್ನು ಕೇವಲ ಒಂದು ಬಾರಿ ನವೀಕರಿಸಬಹುದಾಗಿದೆ. ನ್ಯಾಯಾಧೀಶ ಎ.ಕೆ ಸಿಕ್ರಿ 2019ರ ಮಾರ್ಚ್ 6ರಂದು ಸರ್ವೋಚ್ಚ ನ್ಯಾಯಾಲಯದಿಂದ ನಿವೃತ್ತಿ ಹೊಂದಲಿದ್ದಾರೆ.