ಶಬರಿಮಲೆ ವಿವಾದ: ನಿಲುವು ಬದಲಿಸಿದ ರಾಹುಲ್ ಗಾಂಧಿ ಹೇಳಿದ್ದೇನು?
ದುಬೈ, ಜ.13: ಶಬರಿಮಲೆ ದೇವಸ್ಥಾನಕ್ಕೆ ಸಂಬಂಧಿಸಿದ ವಿವಾದ ಪ್ರಕರಣದಲ್ಲಿ ಎರಡೂ ಕಡೆಯವರ ಧೋರಣೆಯಲ್ಲಿ ನ್ಯಾಯವಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಯುಎಇಯಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ಶಬರಿಮಲೆ ವಿವಾದದ ವಿಷಯ ಸ್ಪಷ್ಟವಾಗಿಲ್ಲ. ಎರಡೂ ಕಡೆಯವರ ಧೋರಣೆ ನ್ಯಾಯಸಮ್ಮತವಾಗಿದೆ. ಸಂಪ್ರದಾಯವನ್ನು ರಕ್ಷಿಸುವ ಅಗತ್ಯವಿದೆ. ಇದೇ ವೇಳೆ, ಮಹಿಳೆಯರು ದೇವಸ್ಥಾನ ಪ್ರವೇಶಿಸಲೂ ಅವಕಾಶ ನೀಡಬೇಕು ಎಂಬುದು ತನ್ನ ಭಾವನೆಯಾಗಿದೆ ಎಂದು ಹೇಳಿದರು. ಇದು ಕಳೆದ ವರ್ಷದ ಅಕ್ಟೋಬರ್ನಲ್ಲಿ ರಾಹುಲ್ ನೀಡಿದ್ದ ಹೇಳಿಕೆಗಿಂತ ಭಿನ್ನವಾಗಿದೆ.
ಋತುಮತಿಯಾಗುವ ವಯಸ್ಸಿನ ಮಹಿಳೆಯರು ಶಬರಿಮಲೆ ದೇವಸ್ಥಾನ ಪ್ರವೇಶಿಸಬಹುದು ಎಂದು ಕಳೆದ ಸೆಪ್ಟೆಂಬರ್ನಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಇದನ್ನು ಆರಂಭದಲ್ಲಿ ಸ್ವಾಗತಿಸಿದ್ದ ಕೇರಳ ಕಾಂಗ್ರೆಸ್, ಬಳಿಕ ನಿಲುವು ಬದಲಿಸಿ , ತೀರ್ಪಿನ ವಿರುದ್ಧ ನಡೆದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿತ್ತು. ಆದರೆ ಪಕ್ಷದ ಕೇರಳ ಘಟಕದ ನಿಲುವನ್ನು ವಿರೋಧಿಸಿದ್ದ ರಾಹುಲ್, ಮಹಿಳೆಯರು ಮತ್ತು ಪುರುಷರು ಸಮಾನರಾಗಿದ್ದು, ಮಹಿಳೆಯರು ತಮಗೆ ಇಷ್ಟ ಬಂದ ಕಡೆಗೆ ಹೋಗಲು ಅವಕಾಶ ಮಾಡಿಕೊಡಬೇಕು ಎಂದಿದ್ದರು.