ದೇಶದ್ರೋಹ ಆರೋಪ: ಕನ್ಹಯ್ಯಾ ಸಹಿತ 11 ಮಂದಿಯ ವಿರುದ್ಧ ಇಂದು ಚಾರ್ಜ್ ಶೀಟ್ ಸಲ್ಲಿಕೆ
ಜೆಎನ್ಯು ಪ್ರಕರಣ
ಹೊಸದಿಲ್ಲಿ, ಜ.14: ರಾಜಧಾನಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಆವರಣದಲ್ಲಿ ಮೂರು ವರ್ಷಗಳ ಹಿಂದೆ, ಫೆಬ್ರವರಿ 9, 2016ರಂದು ನಡೆದ ಪ್ರತಿಭಟನೆಯ ವೇಳೆ ದೇಶವಿರೋಧಿ ಘೋಷಣೆಗಳನ್ನು ಕೂಗಿದ ಆರೋಪ ಎದುರಿಸುತ್ತಿರುವ ಕನ್ಹಯ್ಯ ಕುಮಾರ್, ಸೈಯದ್ ಉಮರ್ ಖಾಲಿದ್, ಅನಿರ್ಬನ್ ಭಟ್ಟಾಚಾರ್ಯ ಸಹಿತ ಒಟ್ಟು 11 ಮಂದಿಯ ವಿರುದ್ಧ ದೆಹಲಿ ಪೊಲೀಸರ ವಿಶೇಷ ಘಟಕ ಇಂದು ದೋಷಾರೋಪ ಪಟ್ಟಿ ಸಲ್ಲಿಸಲಿದೆ.
ಈ ನಿಟ್ಟಿನಲ್ಲಿ ಪೊಲೀಸರು ಪ್ರಾಸಿಕ್ಯೂಶನ್ ಹಾಗೂ ದಿಲ್ಲಿ ಪೊಲೀಸ್ ಆಯುಕ್ತರಿಂದ ಆಗತ್ಯ ಅನುಮತಿಗಳನ್ನು ಪಡೆದುಕೊಂಡಿದ್ದಾರೆ. ದೋಷಾರೋಪ ಪಟ್ಟಿಯನ್ನು ಇಂದು ಪಟಿಯಾಲ ಹೌಸ್ ಕೋರ್ಟಿನ ಮುಂದೆ ಸಲ್ಲಿಸುವ ಸಾಧ್ಯತೆಯಿದೆ.
ಈ ದೋಷಾರೋಪ ಪಟ್ಟಿಯಲ್ಲಿ ಮೇಲೆ ತಿಳಿಸಿದ ಮೂವರ ಹೆಸರುಗಳ ಹೊರತಾಗಿ ಕಾಶ್ಮೀರಿ ನಿವಾಸಿಗಳಾದ ಅಖೀಬ್ ಹುಸೈನ್, ಮುಜೀಬ್ ಹುಸೈನ್, ಮುನೀಬ್ ಹುಸೈನ್, ಉಮರ್ ಗುಲ್, ರಾಯೀಸ್ ರಸೂಲ್, ಬಷರತ್ ಆಲಿ ಹಾಗೂ ಖಾಲಿದ್ ಬಷೀರ್ ಭಟ್ ಹೆಸರುಗಳಿವೆ.
2016ರಲ್ಲಿ ನಡೆದ ಪ್ರತಿಭಟನೆಗೆ ವಿದ್ಯಾರ್ಥಿಗಳು ಅಗತ್ಯ ಅನುಮತಿಗಳನ್ನು ಪಡೆದಿರಲಿಲ್ಲ, ಇದಕ್ಕಾಗಿ ವಿದ್ಯಾರ್ಥಿಗಳನ್ನು ತಡೆದಾಗ ಕನ್ಹಯ್ಯ ಮತ್ತಿತರರು ಹಾಗೂ ಪೊಲೀಸರ ನಡುವೆ ವಾದ ವಿವಾದ ನಡೆದ ಅವರು ಘೋಷಣೆಗಳನ್ನು ಕೂಗಿದ್ದರೆಂದು ದೋಷಾರೋಪ ಪಟ್ಟಿಯಲ್ಲಿ ಆರೋಪಿಸಲಾಗಿದೆ.