'ನನ್ನ ಹಾಡಿನಿಂದ ಗಳಿಸಿದ ಮತಗಳನ್ನು ವಾಪಸ್ ಕೊಡಿ'
ಅಸ್ಸಾಮಿ ಗಾಯಕನಿಂದ ಬಿಜೆಪಿ ವಿರುದ್ಧ ಆಕ್ರೋಶ
ಗುವಹಾಟಿ, ಜ. 15: ಅಸ್ಸಾಂನಲ್ಲಿ 2016ರ ವಿಧಾನಸಭಾ ಚುನಾವಣೆ ಸಂದರ್ಭ ಬಿಜೆಪಿಯ ಜನಪ್ರಿಯ ಪ್ರಚಾರ ಹಾಡು 'ಅಕ್ಸೊಮೊರ್ ಆನಂದ ಸರ್ಬಾನಂದ' ಹಾಡಿದ್ದ ಗಾಯಕ ಝುಬೀನ್ ಗರ್ಗ್, ಇದೀಗ ಬಿಜೆಪಿ ಸರಕಾರದ ವಿವಾದಿತ ಪೌರತ್ವ (ತಿದ್ದುಪಡಿ) ಕಾಯಿದೆ ವಿರೋಧಿಸಿ ಪಕ್ಷವು ಹಾಡು ಹಾಡಿದ್ದಕ್ಕಾಗಿ ತಮಗೆ ನೀಡಿದ್ದ ಶುಲ್ಕವನ್ನು ವಾಪಸ್ ನೀಡುವ ಬಗ್ಗೆ ಹೇಳಿದ್ದಾರೆ.
ತನ್ನ ಹಾಡಿನಿಂದಾಗಿ ಬಿಜೆಪಿ ಪಡೆದ ಮತಗಳನ್ನು ವಾಪಸ್ ನೀಡಬೇಕೆಂದು ಆಗ್ರಹಿಸಿ ಗರ್ಗ್ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಅವರಿಗೆ ಪತ್ರ ಬರೆದ ಬೆನ್ನಲ್ಲೇ ಈ ಮೇಲಿನ ಹೇಳಿಕೆ ನೀಡಿದ್ದಾರೆ.
''ನಿಮಗೆ ಕೆಲ ದಿನಗಳ ಹಿಂದೆ ಪತ್ರ ಬರೆದಿದ್ದೆ. ಆದರೆ ನೀವು ಕರಿ ಬಾವುಟಗಳನ್ನೇ ಲೆಕ್ಕ ಹಾಕುವುದರಲ್ಲಿ ನಿರತರಾಗಿರುವುದರಿಂದ ಪ್ರತಿಕ್ರಿಯಿಸಿಲ್ಲ ಎಂದು ಅಂದುಕೊಳ್ಳುತ್ತೇನೆ'' ಎಂದು ಗರ್ಗ್ ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದಿದ್ದಾರೆ.
''ಹಾಗಾದರೆ ನನ್ನ ಹಾಡಿನಿಂದ ನೀವು 2016ರಲ್ಲಿ ಪಡೆದ ಮತಗಳನ್ನು ವಾಪಸ್ ನೀಡುತ್ತೀರಾ ? ನನಗೆ ನೀಡಿದ ಸಂಭಾವನೆಯನ್ನು ವಾಪಸ್ ನೀಡಲು ನಾನು ಸಿದ್ಧ'' ಎಂದು ಅವರು ಬರೆದಿದ್ದಾರೆ.
2016ರ ಚುನಾವಣಾ ಪ್ರಚಾರ ಸಂದರ್ಭ ಬಿಜೆಪಿ ಉಪಯೋಗಿಸಿದ್ದ ಪ್ರಚಾರ ಹಾಡು 'ಅಕ್ಸೊಮೊರ್ ಆನಂದ ಸರ್ಬಾನಂದ' (ಅಸ್ಸಾಮಿನ ಆನಂದ ಸರ್ಬಾನಂದ) ಇದನ್ನು ಗರ್ಗ್ ಹಾಡಿದ್ದರು. ಬಿಜೆಪಿ ಚುನಾವಣೆ ಗೆದ್ದಿತ್ತಲ್ಲದೆ ಅಸ್ಸಾಂ ಗಣ ಪರಿಷದ್ ಹಾಗೂ ಬೋಡೋಲ್ಯಾಂಡ್ ಪೀಪಲ್ಸ್ ಪ್ರಂಟ್ ಜತೆ ಸೇರಿ ಮೈತ್ರಿ ಸರಕಾರ ರಚಿಸಿತ್ತು.
ಪೌರತ್ವ ಮಸೂದೆ ವಿರೋಧಿಸಿ ಇತ್ತೀಚೆಗಷ್ಟೇ ಅಸ್ಸಾಂ ಗಣ ಪರಿಷದ್ ಮೈತ್ರಿಕೂಟದಿಂದ ಹೊರ ಬಂದಿತ್ತು. ಪಕ್ಷದ ಮೂವರು ಸಚಿವರೂ ರಾಜೀನಾಮೆ ನೀಡಿದ್ದರು.