ಖೇಲೊ ಇಂಡಿಯಾ ಗೇಮ್ಸ್: 'ವಾಟರ್ ಬೇಬಿ' ಕೆನಿಶಾಗೆ ಸ್ವಿಮ್ಮಿಂಗ್ನಲ್ಲಿ 3 ಚಿನ್ನ
ಪುಣೆ, ಜ.15: ಡಾ.ವಿಶಾಲ್ ಗುಪ್ತಾ ಹಾಗೂ ಪ್ರದೀಪ್ತಿ ದಂಪತಿಯ ಪುತ್ರಿ ಕೆನಿಶಾ ಮಗುವಿದ್ದಾಗಲೇ ಈಜುಕೊಳಕ್ಕೆ ಇಳಿದಿದ್ದರು. 10 ವರ್ಷಗಳ ಬಳಿಕ ಈಕೆ ಖೇಲೊ ಇಂಡಿಯಾ ಯೂತ್ ಗೇಮ್ಸ್ನಲ್ಲಿ ಮೂರು ಚಿನ್ನ ಜಯಿಸಿ ಮಿಂಚಿದ್ದು ವಿಶೇಷ.
"ಕೆನಿಶಾಗೆ 4 ವರ್ಷ ಪ್ರಾಯವಾಗಿದ್ದಾಗ ನಾವು ಲಂಡನ್ನಿಂದ ಮುಂಬೈಗೆ ಬಂದೆವು. ಕೆನಿಶಾ ಮಗುವಿದ್ದಾಗ ಬೆಳಗ್ಗೆ ಒಂದು ಅಥವಾ 2 ಗಂಟೆಗೆ ಏಳುತ್ತಿದ್ದಳು.ಇಡೀ ದಿನಕ್ಕೆ ಕೇವಲ ಎರಡು-ಮೂರು ಗಂಟೆ ನಿದ್ರಿಸುತ್ತಿದ್ದಳು. ಮುಂಬೈಗೆ ಬಂದ ಬಳಿಕ ಆಕೆಯನ್ನು ಈಜುಕೊಳಕ್ಕೆ ಇಳಿಸಿದ್ದೆವು. ಮೊದಲ ದಿನ ಈಜುಕೊಳದಲ್ಲಿ ಇಳಿದ ಬಳಿಕ ಆಕೆ ಇಡೀ ರಾತ್ರಿ ಮಲಗಿದಾಗ ನಮಗೆ ಅಚ್ಚರಿಯಾಗಿತ್ತು.ಆಗ ನಾವು ಆಕೆಯನ್ನು ಈಜಿನ ಅಕಾಡಮಿಗೆ ಸೇರಿಸಲು ನಿರ್ಧರಿಸಿದ ಬಳಿಕ ಪ್ರತಿದಿನ ರಾತ್ರಿ ನಿದ್ರಿಸತೊಡಗಿದಳು'' ಎಂದು ಪ್ರದೀಪ್ತಿ ಹೇಳಿದ್ದಾರೆ.
ಕೆನಿಶಾಗೆ ಈಗ 15 ವರ್ಷ. ಕಳೆದ ವರ್ಷ ಕೇರಳದಲ್ಲಿ ನಡೆದ ನ್ಯಾಶನಲ್ ಚಾಂಪಿಯನ್ಶಿಪ್ನಲ್ಲಿ ಕೆನಿಶಾ 8 ಪದಕ ಜಯಿಸಿದ್ದರು. ಪುಣೆಯಲ್ಲಿ ಈಗ ನಡೆಯುತ್ತಿರುವ ಖೇಲೊ ಇಂಡಿಯಾ ಯೂತ್ ಗೇಮ್ಸ್ನಲ್ಲಿ 100 ಮೀ.ಬಟರ್ ಫ್ಲೈ, 200 ಮೀ. ವೈಯಕ್ತಿಕ ಮಿಡ್ಲೆ ಹಾಗೂ 100 ಮೀ. ಫ್ರೀಸ್ಟೈಲ್ ಇವೆಂಟ್ನಲ್ಲಿ ಚಿನ್ನ ಜಯಿಸಿ ಮಿಂಚಿದ್ದಾರೆ.
"ನಾನು ನೀರಿನಲ್ಲಿದ್ದಾಗ ವಿಭಿನ್ನ ವ್ಯಕ್ತಿಯಾಗಿರುವೆ. ಶಾಂತ ಹಾಗೂ ನೆಮ್ಮದಿಯಾಗಿರುವೆ. ನಾನೊಬ್ಬ ವಾಟರ್ ಬೇಬಿ ಎಂಬ ಭಾವನೆ ಉಂಟಾಗುತ್ತಿದೆ'' ಎಂದು ಕೆನಿಶಾ ಹೇಳಿದ್ದಾರೆ.