ವೈದ್ಯಕೀಯ ತಪಾಸಣೆಗೆ ಅಮೆರಿಕಕ್ಕೆ ತೆರಳಿದ ಅರುಣ್ ಜೇಟ್ಲಿ
ಹೊಸದಿಲ್ಲಿ, ಜ.15: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅನಿರೀಕ್ಷಿತವಾಗಿ ವೈದ್ಯಕೀಯ ತಪಾಸಣೆ ನಿಮಿತ್ತ ಅಮೆರಿಕಕ್ಕೆ ಪ್ರಯಾಣಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ೆಕಿಡ್ನಿಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿರುವ ಜೇಟ್ಲಿ 2018ರ ಮೇ 14 ರಂದು ಮೂತ್ರಪಿಂಡದ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕಳೆದ 9 ತಿಂಗಳುಗಳಿಂದ ವಿದೇಶಕ್ಕೆ ಪ್ರವಾಸ ಕೈಗೊಂಡಿಲ್ಲ. ಕಳೆದ ವರ್ಷ ಎಪ್ರಿಲ್ನಲ್ಲಿ ಲಂಡನ್ನಲ್ಲಿ ನಡೆದ 10ನೇ ಭಾರತ-ಬ್ರಿಟನ್ ಆರ್ಥಿಕ ಹಾಗೂ ಹಣಕಾಸು ಮಾತುಕತೆ ಸಭೆಗೆ ಜೇಟ್ಲಿ ಗೈರು ಹಾಜರಾಗಿದ್ದರು.
ಜೇಟ್ಲಿ ರವಿವಾರ ರಾತ್ರಿ ವೈದ್ಯಕೀಯ ತಪಾಸಣೆ ಸಲುವಾಗಿ ಅಮೆರಿಕಕ್ಕೆ ತೆರಳಿದ್ದಾರೆ. ಫೆ.1 ರಂದು ನಡೆಯುವ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರದ ಕೊನೆಯ ಹಾಗೂ ತನ್ನ ಆರನೇ ಬಜೆಟ್ ಮಂಡಿಸಲಿದ್ದಾರೆ.
ಕಳೆದ ವರ್ಷದ ಎಪ್ರಿಲ್ನಿಂದ ತನ್ನ ಕಚೇರಿಗೆ ಹಾಜರಾಗಿರುವುದನ್ನು ನಿಲ್ಲಿಸಿದ್ದ 66ರ ಹರೆಯದ ಜೇಟ್ಲಿ ಆಗಸ್ಟ್ 23ರಂದು ಹಣಕಾಸು ಸಚಿವಾಲಯದಲ್ಲಿ ಹಾಜರಾಗಿದ್ದರು. 2014ರಲ್ಲಿ ತೂಕ ಕಡಿಮೆ ಮಾಡಿಕೊಳ್ಳಲು ಬರಿಯಾಟ್ರಿಕ್ ಸರ್ಜರಿಗೆ ಒಳಗಾಗಿದ್ದರು. ಮ್ಯಾಕ್ಸ್ ಆಸ್ಪತ್ರೆಯಲ್ಲಿ ಈ ಸರ್ಜರಿ ನಡೆಸಲಾಗಿತ್ತು. ಸಂಕೀರ್ಣ ಸ್ಥಿತಿಯ ಹಿನ್ನೆಲೆಯಲ್ಲಿ ಅವರನ್ನು ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಕೆಲವು ವರ್ಷಗಳ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.