ಕೊಲ್ಲಂ ಬೈಪಾಸ್ ಉದ್ಘಾಟಿಸಿದ ಮೋದಿಯ ಕಾಲೆಳೆದ ಮಲಯಾಳಿಗಳು
ಕೇರಳ, ಜ.16: ಕೊಲ್ಲಂ ಹೆದ್ದಾರಿಯ 13 ಕಿಲೋಮೀಟರ್ ಭಾಗದ ಉದ್ಘಾಟನೆಗೆ ಕೇರಳಕ್ಕೆ ಭೇಟಿ ನೀಡುವ ಮುನ್ನ ಪ್ರಧಾನಿ ನರೇಂದ್ರ ಮೋದಿಯವರನ್ನು ಟ್ವಿಟರ್ನಲ್ಲಿ ಹಲವು ಮಂದಿ ಕಾಲೆಳೆದಿದ್ದಾರೆ.
ಮುಖ್ಯವಾಗಿ ಆಡಳಿತಾರೂಢ ಎಡರಂಗದ ಬೆಂಬಲಿಗರು ಮೋದಿಯವರನ್ನು ಟೀಕಿಸಿದ್ದು, ಕೇವಲ 13 ಕಿಲೋಮೀಟರ್ ಉದ್ದದ ಹೆದ್ದಾರಿ ಉದ್ಘಾಟನೆಗೆ "ಸುದೀರ್ಘ ಪ್ರಯಾಣ" ಮಾಡಿ ಬರುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಮಲಯಾಳಂ ಲೇಖಕ ಎನ್.ಎಸ್.ಮಾಧವನ್ ಟ್ವೀಟ್ ಮಾಡಿ, "ಸ್ಮೃತಿ ಇರಾನಿ ಬಗೆಗೆ ನನಗೆ ಗೌರವ ದಿಢೀರನೇ ಹೆಚ್ಚುತ್ತಿದೆ. ಕನಿಷ್ಠ ಅವರಿಗೆ ಉದ್ಘಾಟನೆಗೆ ಸಿಟಿ ಸ್ಕ್ಯಾನ್ ಮೆಷಿನ್ ಆದರೂ ಇತ್ತು. ಆದರೆ ಮೋದಿ 3500 ಕಿಲೋಮೀಟರ್ ಪ್ರಯಾಣ ಕೈಗೊಂಡು ಕೊಲ್ಲಂಗೆ 2 ಲೇನ್ನ 13 ಕಿಲೋಮೀಟರ್ ಬೈಪಾಸ್ ಉದ್ಘಾಟಿಸಲು ಬರುತ್ತಿದ್ದಾರೆ!" ಎಂದು ಕುಟುಕಿದ್ದಾರೆ.
ಈ ಟೀಕೆ ಹಿನ್ನೆಲೆಯಲ್ಲಿ #PavanayiModiAyi, #OduModiKandamVazhiಎಂಬ ಹ್ಯಾಷ್ಟ್ಯಾಗ್ಗಳು ಹುಟ್ಟಿಕೊಂಡಿವೆ. ಪವನಾಯಿ ಎಂದರೆ ಮೋಹನ್ಲಾಲ್ ನಟನೆಯ ಚಿತ್ರದ ಒಂದು ಪಾತ್ರವಾಗಿದ್ದು, ಹತ್ಯೆ ಮಾಡಲು ನಿಯೋಜಿತನಾದ ಬಾಡಿಗೆ ಹಂತಕ. ಆದರೆ ಆತನೇ ಕೊನೆಗೆ ಕೊಲ್ಲಲ್ಪಡುತ್ತಾನೆ.