ಎಲ್ಲರ ನೆಚ್ಚಿನ ಚಂದಮಾಮ ಮಾರಾಟಕ್ಕಿದೆ
ಚಂದಮಾಮಕ್ಕೆ ಸೇರಿದ ಬೌದ್ಧಿಕ ಆಸ್ತಿ ಹಕ್ಕುಗಳ ಮಾರಾಟಕ್ಕೆ ಬಾಂಬೆ ಹೈಕೋರ್ಟ್ ಆದೇಶ
ಮುಂಬೈ, ಜ.17: ಭಾರತ ಸ್ವಾತಂತ್ರ ಪಡೆದ ವರ್ಷದಲ್ಲಿ(ಜುಲೈ, 1947)ಬಿ.ನಾಗಿ ರೆಡ್ಡಿ ಹಾಗೂ ಚಕ್ರಪಾಣಿ ಅವರಿಂದ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಮೊದಲ ಬಾರಿ ಪ್ರಕಟಗೊಂಡ ಚಂದಮಾಮ ಮಕ್ಕಳ ನಿಯತಕಾಲಿಕ ಕನ್ನಡ, ಸಂಸ್ಕೃತ ಸೇರಿದಂತೆ ಒಟ್ಟು 13 ಭಾಷೆಗಳಲ್ಲಿ ಅಚ್ಚಾಗಿ ದೇಶದ ಜನತೆಯ ಬಾಲ್ಯದ ನೆಚ್ಚಿನ ಒಡನಾಡಿಯಾಗಿ ಬೆಳೆದುನಿಂತಿತು. ಚೆನ್ನೈ ಮೂಲದ ಚಂದಮಾಮ ದೇಶಕ್ಕೆ ಡಿಜಿಟಲ್ಯುಗ ಕಾಲಿಡುವ ತನಕ ಎಲ್ಲರ ನೆಚ್ಚಿನ ನಿಯತಕಾಲಿಕವಾಗಿತ್ತು.
ಕೋಟಿ ರೂ. ಬೆಲೆಬಾಳುವ ಚಂದಮಾಮ ಈಗ ಮಾರಾಟಕ್ಕಿದೆ. ಜ.11 ರಂದು ಬಾಂಬೆ ಹೈಕೋರ್ಟ್ ನೀಡಿರುವ ಆದೇಶದಲ್ಲಿ ಚಂದಮಾಮಕ್ಕೆ ಸೇರಿದ ಬೌದ್ಧಿಕ ಆಸ್ತಿ ಹಕ್ಕುಗಳ ಮಾರಾಟಕ್ಕೆ ಸೂಚಿಸಿದೆ. ಚಂದಮಾಮ ಮ್ಯಾಗಝಿನ್ನ್ನು ಖರೀದಿಸಿರುವ ಜಿಯೊಡೆಸಿಕ್ ಲಿಮಿಡೆಡ್ ಕಂಪೆನಿ ವಂಚನೆ ಆರೋಪದಲ್ಲಿ ತಾತ್ಕಾಲಿಕ ದಿವಾಳಿತನ ಎದುರಿಸುತ್ತಿದೆ.
ಜಿಯೊಡೆಸಿಕ್ ಕಂಪೆನಿಯ ನಿರ್ದೇಶಕರು ನ್ಯಾಯಾಲಯದ ಮುಂದೆ ಹಾಜರಾಗಿ ಕಾನೂನಿನ ನ್ಯಾಯಾಲಯದ ಆದೇಶದಂತೆ ಜಾರಿ ನಿರ್ದೇಶನಾಲಯದ ಪರವಾಗಿ ತನ್ನ ಅಂಗಸಂಸ್ಥೆಗಳ(ಭಾರತ, ಸಾಗರೋತ್ತರ ಕಂಪೆನಿಗಳು)ಸೇರಿದಂತೆ ಜಿಯೊಡೆಸಿಕ್ ಲಿ. ಸ್ಪಷ್ಟ ಹಾಗೂ ಅಸ್ಪಷ್ಟ ಸ್ವತ್ತುಗಳ ಸ್ವಾಧೀನಪಡಿಸುವುದು ಹಾಗೂ ಮಾರಾಟ ಮಾಡುವುದಕ್ಕೆ ಬೇಷರತ್ ಸಮ್ಮತಿ ನೀಡಬೇಕೆಂದು ಜಸ್ಟಿಸ್ ಎಸ್ಜೆ ಕಥವಲ್ಲಾ ಆದೇಶಿಸಿದ್ದಾರೆ.
ಜಿಯೊಸೆಕ್ನ ಮೂವರು ನಿರ್ದೇಶಕರಾದ ಕಿರಣ್ ಪ್ರಕಾಶ್ ಕುಲಕರ್ಣಿ, ಪ್ರಶಾಂತ್ ಮುಲೇಕರ್ ಹಾಗೂ ಪಂಕಜ್ ಶ್ರೀವಾಸ್ತವ ಹಾಗೂ ಕಂಪೆನಿಯ ಲೆಕ್ಕಪರಿಶೋಧಕ ದಿನೇಶ್ ಜಜೋಡಿಯಾ ಪ್ರಸ್ತುತ ಬಂಧನದಲ್ಲಿದ್ದಾರೆ.
ಮೂಲಗಳ ಪ್ರಕಾರ, ಚಂದಮಾಮ ನಿಯತಕಾಲಿಕ ಒಂದೇ 25 ಕೋ.ರೂ. ಬೆಲೆ ಬಾಳುತ್ತದೆ. ಚಂದಮಾಮವಲ್ಲದೆ ಜಾರಿನಿರ್ದೇಶನಾಲಯ ಪಿಎಂಎಲ್ಎ ಪ್ರಕಾರ ಜಿಯೊಡೆಸಿಕ್ ಲಿ. ನಿರ್ದೇಶಕರ 16 ಕೋ.ರೂ. ಆಸ್ತಿಯನ್ನು ಸೇರಿಸಿಕೊಂಡಿದೆ.
2007ರ ಮಾರ್ಚ್ನಲ್ಲಿ ಚಂದಮಾಮ ಮ್ಯಾಗಝಿನ್ ಪ್ರಸರಣ ಹಾಗೂ ಜಾಹೀರಾತು ಆದಾಯದಲ್ಲಿ ಕೊರತೆ ಅನುಭವಿಸಿ ಹಣಕಾಸು ಸಮಸ್ಯೆಗೆ ಸಿಲುಕಿದಾಗ ಜಿಯೊಡೆಸಿಕ್ ಕಂಪೆನಿಯು 10.2 ಕೋ.ರೂ.ಗೆ ಚಂದಮಾಮದ ಶೇ.94ರಷ್ಟು ಷೇರನ್ನು ಪಡೆದಿತ್ತು.
ಜಿಯೊಡೆಸಿಕ್ ಕಂಪೆನಿ ಎಪ್ರಿಲ್,2014ರಲ್ಲಿ ತನ್ನ 15 ವಿದೇಶಿ ಕರೆನ್ಸಿ ಪರಿವರ್ತಕ ಬಾಂಡ್ ಹೊಂದಿರುವವರಿಗೆ ಸುಮಾರು 1,000 ಕೋ.ರೂ.ಗೆ ಪಾವತಿಸಲು ವಿಫಲವಾದ ಆರೋಪ ಎದುರಿಸಿತ್ತು. ಈ ಕಂಪೆನಿ ಹಾಗೂ ಅಧಿಕಾರಿಗಳ ಮೇಲೆ ತೆರಿಗೆ ವಂಚಿಸಿದ ಆರೋಪಕ್ಕೆ ಸಂಬಂಧಿಸಿ ಇಡಿ, ಆರ್ಥಿಕ ಅಪರಾಧ ವಿಭಾಗ ಹಾಗೂ ಮುಂಬೈ ಪೊಲೀಸರು ನಿಗಾಹಿಸಿದ್ದಾರೆ