ಮದ್ಯಪ್ರಿಯರಿಗೆ ಗೋವಾ ಸರ್ಕಾರ ಶಾಕ್ !
ಪಣಜಿ, ಜ. 25: ನಾಗರಿಕ ಸಮಾಜ ಹಾಗೂ ಪ್ರವಾಸೋದ್ಯಮ ವಲಯದಿಂದ ಬಂದ ಒತ್ತಡದ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಅಸಹ್ಯ ಹುಟ್ಟಿಸುವಂಥ ಪ್ರವಾಸಿಗರ ನಡವಳಿಕೆಗೆ 2000 ರೂ. ದಂಡ ವಿಧಿಸಲು ಗೋವಾ ಸರ್ಕಾರ ನಿರ್ಧರಿಸಿದೆ.
ಈ ಸಂಬಂಧ ಪ್ರವಾಸಿ ವ್ಯಾಪಾರ ಕಾಯ್ದೆಗೆ ತಿದ್ದುಪಡಿ ತರಲು ಗುರುವಾರ ಸಂಜೆ ನಡೆದ ಗೋವಾ ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ. ದೊಡ್ಡ ಗುಂಪುಗಳಲ್ಲಿ ಆಗಮಿಸುವ ಪ್ರವಾಸಿಗರು ಈ ಕಾಯ್ದೆಯನ್ನು ಉಲ್ಲಂಘಿದಲ್ಲಿ 10 ಸಾವಿರ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲೂ ನಿರ್ಧರಿಸಲಾಗಿದೆ ಎಂದು ಪ್ರವಾಸೋದ್ಯಮ ಖಾತೆ ಸಚಿವ ಮನೋಹರ ಅಜಗಾಂವ್ಕರ್ ವಿವರಿಸಿದರು.
"ಪ್ರವಾಸಿಗರು ಬೀಚ್ಗಳಲ್ಲಿ ಅಥವಾ ಪ್ರವಾಸಿತಾಣಗಳಲ್ಲಿ ಮದ್ಯದ ಬಾಟಲಿ ಒಯ್ಯುವುದು ಮತ್ತು ಆಲ್ಕೋಹಾಲ್ ಸೇವಿಸುವುದನ್ನು ನಿಷೇಧಿಸಲಾಗಿದೆ. ಅಂತೆಯೇ ತೆರೆದ ಪ್ರದೇಶದಲ್ಲಿ ಅಡುಗೆ ಮಾಡಿಕೊಳ್ಳುವುದು ಕೂಡಾ ನಿಷಿದ್ಧ. ಇದಕ್ಕೆ 2000 ರೂಪಾಯಿ ದಂಡ ವಿಧಿಸಲಾಗುತ್ತದೆ" ಎಂದು ಸ್ಪಷ್ಟಪಡಿಸಿದರು.
ದಂಡ ಪಾವತಿಸದಿದ್ದರೆ, ಅಪರಾಧ ಪ್ರಕರಣ ದಾಖಲಿಸಲಾಗುತ್ತದೆ ಹಾಗೂ ಬಂಧಿಸಿ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ವಿವರಿಸಿದರು. ಮುಂಬರುವ ಬಜೆಟ್ ಅಧಿವೇಶನದಲ್ಲಿ ಈ ತಿದ್ದುಪಡಿಗಳನ್ನು ಮಂಡಿಸಲು ಸರ್ಕಾರ ನಿರ್ಧರಿಸಿದೆ.