ಶಬರಿಮಲೆ ವಿವಾದ : ಚಿತ್ರನಿರ್ದೇಶಕ ಪ್ರಿಯಾನಂದನ್ ಮೇಲೆ ಸಗಣಿ ಎರಚಿ ಹಲ್ಲೆ
ತಿರುವನಂತಪುರ, ನ.25: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿ ಫೇಸ್ಬುಕ್ನಲ್ಲಿ ಪ್ರತಿಕ್ರಿಯಿಸಿದ್ದ ಮಲಯಾಳಂನ ಖ್ಯಾತ ಚಿತ್ರನಿರ್ದೇಶಕ ಪ್ರಿಯಾನಂದನ್ ಮೇಲೆ ಕೇರಳದ ತ್ರಿಶೂರ್ನಲ್ಲಿ ಶುಕ್ರವಾರ ಬೆಳಗ್ಗೆ ಶಂಕಿತ ಸಂಘಪರಿವಾರದ ಕಾರ್ಯಕರ್ತ ಹಲ್ಲೆ ನಡೆಸಿ ಸಗಣಿ ಎರಚಿದ್ದಾನೆೆ ಎಂದು ಪೊಲೀಸರು ತಿಳಿಸಿದ್ದಾರೆ.
‘‘ಪ್ರಿಯಾನಂದನ್ ಮೇಲೆ ಹಲ್ಲೆ ನಡೆಸಿ, ಸಗಣಿ ನೀರನ್ನು ಮೈಮೇಲೆ ಎರಚಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ’’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈಗ ನಡೆಯುತ್ತಿರುವ ಶಬರಿಮಲೆ ಹೋರಾಟಕ್ಕೆ ಸಂಬಂಧಿಸಿದಂತೆ ಪ್ರಿಯಾನಂದನ್ ಇತ್ತೀಚೆಗೆ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದರು. ಇದು ವಿವಾದಕ್ಕೀಡಾದ ಹಿನ್ನೆಲೆಯಲ್ಲಿ ಅವರು ಫೇಸ್ಬುಕ್ ಪೋಸ್ಟ್ನ್ನು ಅಳಿಸಿಹಾಕಿದ್ದರು. ‘‘ಶುಕ್ರವಾರ ಬೆಳಗ್ಗೆ 9ರ ಸುಮಾರಿಗೆ ನನ್ನ ಬರುವಿಕೆಗಾಗಿ ಕಾಯುತ್ತಿದ್ದ ವ್ಯಕ್ತಿಯೊಬ್ಬ ನನ್ನ ಬಳಿ ಬಂದು ಹಲ್ಲೆ ನಡೆಸಿದ. ಮೈ ಮೇಲೆ ಸಗಣಿ ಎರಚಿದ್ದ. ಫೇಸ್ಬುಕ್ ಪೋಸ್ಟ್ ಬಗ್ಗೆ ಆತ ಕೂಗಾಡಿದ. ನಾನು ದುಷ್ಕರ್ಮಿಯನ್ನು ಗುರುತಿಸಬಲ್ಲೆ. ಈ ದಾಳಿಯ ಹಿಂದೆ ಓರ್ವ ವ್ಯಕ್ತಿ ಮಾತ್ರವಲ್ಲ ದೊಡ್ಡ ಗುಂಪು ಇದೆ’’ ಎಂದು ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಯಾಗಿರುವ ಪ್ರಿಯಾನಂದನ್ ಹೇಳಿದ್ದಾರೆ.
ಪ್ರಿಯಾನಂದನ್ ಮೇಲೆ ನಡೆಸಲಾಗಿರುವ ದಾಳಿಯನ್ನು ಖಂಡಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ದಾಳಿಕೋರರನ್ನು ತಕ್ಷಣವೇ ಬಂಧಿಸುವಂತೆ ತ್ರಿಶೂರ್ ಪೊಲೀಸ್ ಆಯುಕ್ತರಿಗೆ ಆದೇಶಿಸಿದ್ದಾರೆ.
‘‘ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸುವವರ ವಿರುದ್ಧ ದಾಳಿ ನಡೆಸುವುದನ್ನು ನಾವು ಸಹಿಸುವುದಿಲ್ಲ. ಸಂಘಪರಿವಾರದವರು ಕೇರಳದಲ್ಲಿ ಉತ್ತರ ಭಾರತ ರೀತಿಯ ದಾಳಿ ನಡೆಸಲು ಯತ್ನಿಸುತ್ತಿದ್ದಾರೆ’’ಎಂದು ವಿಜಯನ್ ಹೇಳಿದ್ದಾರೆ.
ಪ್ರಿಯಾನಂದನ್ ತಾನು ನಿರ್ದೇಶಿಸಿದ ಚಿತ್ರಕ್ಕೆ 2006ರಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು.