ಆಯತಪ್ಪಿ ಬಿದ್ದ ಛಾಯಾಗ್ರಾಹಕನ ರಕ್ಷಣೆಗೆ ಧಾವಿಸಿದ ರಾಹುಲ್ ಗಾಂಧಿ
ಭುಬನೇಶ್ವರ್, ಜ. 25: ಆಯ ತಪ್ಪಿ ಮೆಟ್ಟಿಲುಗಳಲ್ಲಿ ಬಿದ್ದ ಛಾಯಾಗ್ರಾಹಕನ ರಕ್ಷಣೆಗೆ ಧಾವಿಸಿ ಆತನನ್ನು ಆಧರಿಸಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಕೇವಲ ಮೂರು ಸೆಕೆಂಡುಗಳು ಸಾಕಾಗಿತ್ತು.
ಆ ವ್ಯಕ್ತಿ ದಿಢೀರನೇ ಮೆಟ್ಟಿಲುಗಳಲ್ಲಿ ಉರುಳಿ ಬಿದ್ದಿದ್ದ. ಏನಾಯಿತೆಂದು ತಿಳಿಯುವಷ್ಟರಲ್ಲಿ ಆತನಿಗೆ ತಮ್ಮ ಕೈ ನೀಡಿ ನಿಂತುಕೊಳ್ಳಲು ಸಹಾಯ ಮಾಡಿದವರು ರಾಹುಲ್ ಎಂದು ಅವರಿಗೆ ಅರಿವಾಗಿತ್ತು. ಈ ಘಟನೆ ನಡೆದಿದ್ದು ಭುಬನೇಶ್ವರ ವಿಮಾನ ನಿಲ್ದಾಣದಲ್ಲಿ.
ಈ ಘಟನೆಯನ್ನು ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಲು ಕಾಂಗ್ರೆಸ್ ಸದಸ್ಯೆ ಹಸೀಬಾ ಎಂಬವರು ಟ್ವೀಟ್ ಮಾಡಿದ್ದು, ''ಆಯ ತಪ್ಪಿ ಬಿದ್ದ ಛಾಯಾಗ್ರಾಹಕರೊಬ್ಬರ ಸಹಾಯಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಗೆ ಓಡಿ ಬಂದರೆಂದು ನೋಡಿ. ಪ್ರಧಾನಿ ಮೋದಿ ಭಾಷಣ ಮಾಡುತ್ತಿದ್ದಾಗ ಪೊಲೀಸರೊಬ್ಬರು ಮೃತಪಟ್ಟಾಗಿನ ಘಟನೆಯನ್ನು ಇದಕ್ಕೆ ಹೋಲಿಸಿ. ಅವರು ತಿರುಗಿ ನೋಡಿದರು, ಏನೂ ಆಗಿಯೇ ಇಲ್ಲವೆಂಬಂತೆ ತಮ್ಮ ಭಾಷಣ ಮುಂದುವರಿಸಿದರು'' ಎಂದು ಹಸೀಬಾ ಟ್ವೀಟ್ ಮಾಡಿದ್ದಾರೆ.
''ಯಾರು ಸತ್ತರೂ ಚಿಂತೆಯಿಲ್ಲ, ಮೋದೀಜಿ ತಮ್ಮ ಭಾಷಣ ಮುಂದುವರಿಸುತ್ತಾರೆ,'' ಎಂದೂ ಟ್ವೀಟ್ ಮಾಡಿದ ಅವರು ಜತೆಗೆ ಒಂದು ವೀಡಿಯೊ ಕೂಡ ಪೋಸ್ಟ್ ಮಾಡಿದರು.
ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಭಾಷಣ ಮಾಡುತ್ತಿದ್ದ ವೀಡಿಯೊ ಅದಾಗಿತ್ತು. ಆಗ ವೇದಿಕೆಯಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಎಲ್ಲರೂ ಅಂದುಕೊಂಡಂತೆ ಸತ್ತಿರಲಿಲ್ಲ. ಆಗಿನ ಗುಜರಾತ್ ಪೊಲೀಸ್ ಮುಖ್ಯಸ್ಥರಾಗಿದ್ದ ಅಮಿತಾಭ್ ಪಾಠಕ್ ಪ್ರಜ್ಞೆ ತಪ್ಪಿ ಬಿದ್ದಿದ್ದರಷ್ಟೆ, ನಂತರ ತಾನು ಚೆನ್ನಾಗಿದ್ದೇನೆ ಎಂದೂ ಅವರು ಹೇಳಿದ್ದರು. ಘಟನೆ 2013ರಲ್ಲಿ ನಡೆದಿತ್ತು.
ಆದರೆ ಆ ಪೊಲೀಸ್ ಅಧಿಕಾರಿ ಒಂದು ವಾರದ ನಂತರ ಥೈಲ್ಯಾಂಡ್ ನಲ್ಲಿ ರಜೆಯಲ್ಲಿದ್ದಾಗ ಮೃತಪಟ್ಟಿದ್ದರು.
#WATCH Congress President Rahul Gandhi checks on a photographer who tripped and fell at Bhubaneswar Airport, Odisha. pic.twitter.com/EusYlzlRDn
— ANI (@ANI) January 25, 2019