ಸಿಪಿಎಂ ಕಚೇರಿಗೆ ದಾಳಿ ಮಾಡಿದ ಮಹಿಳಾ ಐಪಿಎಸ್ ಅಧಿಕಾರಿ ಯಾರು ಗೊತ್ತೇ ?
![ಸಿಪಿಎಂ ಕಚೇರಿಗೆ ದಾಳಿ ಮಾಡಿದ ಮಹಿಳಾ ಐಪಿಎಸ್ ಅಧಿಕಾರಿ ಯಾರು ಗೊತ್ತೇ ? ಸಿಪಿಎಂ ಕಚೇರಿಗೆ ದಾಳಿ ಮಾಡಿದ ಮಹಿಳಾ ಐಪಿಎಸ್ ಅಧಿಕಾರಿ ಯಾರು ಗೊತ್ತೇ ?](https://www.varthabharati.in/sites/default/files/images/articles/2019/01/27/174904.jpg)
ತಿರುವನಂತಪುರ, ಜ.27: ಸಿಪಿಎಂ ಜಿಲ್ಲಾ ಸಮಿತಿಯ ತಿರುವನಂತಪುರ ಜಿಲ್ಲಾ ಕಚೇರಿಗೆ ದಾಳಿ ನಡೆಸಿದ್ದ ಕೇರಳದ ಮಹಿಳಾ ಐಪಿಎಸ್ ಅಧಿಕಾರಿ ಚೈತ್ರಾ ತೆರೆಸಾ ಜಾನ್ ವಿರುದ್ಧ ಇಲಾಖಾ ತನಿಖೆಗೆ ಆದೇಶ ನೀಡಲಾಗಿದ್ದು, ಅವರಿಗೆ ಗೃಹ ಇಲಾಖೆಯಿಂದ ಶೋ ಕಾಸ್ ನೋಟಿಸ್ ಜಾರಿಯಾಗಿದೆ.
ಎಸ್ ಪಿ ಚೈತ್ರಾ ತೆರೆಸಾ ದಾಳಿ ಪ್ರಕರಣದಿಂದಾಗಿ ಆಡಳಿತಾರೂಢ ಸಿಪಿಎಂ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗಿದೆ ಎನ್ನಲಾಗಿದೆ.
ಚೈತ್ರಾ ತೆರೆಸಾ ಅವರಿಗೆ ತಾತ್ಕಾಲಿಕವಾಗಿ ನೀಡಲಾಗಿದ್ದ ಪ್ರಭಾರ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಹುದ್ದೆಯಿಂದ ತೆರವುಗೊಳಿಸಲಾಗಿದ್ದು ಅವರನ್ನು ಮಹಿಳಾ ಘಟಕಕ್ಕೆ ಮತ್ತೆ ನಿಯೋಜಿಸಲಾಗಿದೆ.
ಡಿಸಿಪಿ ಆರ್ ಆದಿತ್ಯ ಅವರನ್ನು ಶಬರಿಮಲೆಯ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಈ ಅವಧಿಯಲ್ಲಿ ಚೈತ್ರಾ ತೆರೆಸಾ ಜಾನ್ ಗೆ ಪ್ರಭಾರ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿಕೊಡಲಾಗಿತ್ತು.
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಇಬ್ಬರು ಸಿಪಿಎಂ ಕಾರ್ಯಕರ್ತರನ್ನು ಮೆಡಿಕಲ್ ಕಾಲೇಜು ಪೊಲೀಸರು ಬಂಧಿಸಿದ್ದರು. ಅವರನ್ನು ಭೇಟಿಯಾಗಲು ತೆರಳಿದ್ದ ಡಿವೈಎಫ್ ಐ ಕಾರ್ಯಕರ್ತರಿಗೆ ಅವಕಾಶ ನಿರಾಕರಿಸಲಾಗಿತ್ತು. ಇದರಿಂದ ಕೋಪಗೊಂಡ ಗುಂಪೊಂದು ಜನವರಿ 23ರಂದು ಮೆಡಿಕಲ್ ಕಾಲೇಜು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿತ್ತು. ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 9 ಮಂದಿ ಡಿವೈಎಫ್ ಐ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿತ್ತು.
ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪಿಗಳು ಮೆಟ್ಟುಕ್ಕಡಾ ಪಕ್ಷದ ಕಚೇರಿಯಲ್ಲಿ ಅಡಗಿಕೊಂಡಿದ್ದಾರೆ ಎಂಬ ಖಚಿತ ವರ್ತಮಾನದ ಮೇರೆಗೆ ಚೈತ್ರಾ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿತ್ತು. ಚೈತ್ರಾ ಅವರಿಗೆ ಆರಂಭದಲ್ಲಿ ಪಕ್ಷದ ಕಚೇರಿಗೆ ಪ್ರವೇಶಿಸಲು ಸಿಪಿಎಂ ಕಾರ್ಯಕರ್ತರು ಅವಕಾಶ ನಿರಾಕರಿಸಿದ್ದರು, ಅವರು ಯಾವುದೇ ಪ್ರಭಾವಕ್ಕೂ ಮಣಿಯದೆ ಸಿಪಿಎಂ ಕಚೇರಿ ಪ್ರವೇಶಿಸಿ ಆರೋಪಿಗಳಿಗಾಗಿ ಶೋಧ ನಡೆಸಿದ್ದರು . ಈ ಪ್ರಕರಣ ಪಕ್ಷದ ವರ್ಚಸ್ಸಿಗೆ ಧಕ್ಕೆಯನ್ನುಂಟು ಮಾಡಿತ್ತು . ಈ ಘಟನೆಯ ಬಳಿಕ ಚೈತ್ರಾ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು ಎನ್ನಲಾಗಿದೆ.
ಈ ಅಧಿಕಾರಿ ಯಾರು ?
ಚೈತ್ರಾ ತೆರೆಸಾ ಜಾನ್ ಅವರು ಹಿರಿಯ ಐಆರ್ ಎಸ್ ಅಧಿಕಾರಿ ಡಾ ಜಾನ್ ಜೋಸೆಫ್ ಮತ್ತು ಪಶುವೈದ್ಯಕೀಯ ಇಲಾಖೆಯ ಹೆಚ್ಚುವರಿ ನಿರ್ದೇಶಕಿ ಡಾ. ಮೇರಿ ಅಬ್ರಹಾಂ ದಂಪತಿಯ ಪುತ್ರಿ. ಕೋಝಿಕ್ಕೋಡ್ ನ ಈಸ್ಟ್ ಹಿಲ್ ನ ನಿವಾಸಿಗಳು. 1983ರ ಬ್ಯಾಚ್ ನ ಐಆರ್ ಎಸ್ ಅಧಿಕಾರಿ ಡಾ.ಜಾನ್ ಜೋಸೆಫ್ ಅವರು ಕಸ್ಟಮ್ಸ್ ಇಲಾಖೆ ಮತ್ತು ಡಿಆರ್ ಐ ನಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಕರ್ತವ್ಯದಲ್ಲಿ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯ ಮೂಲಕ ಗಮನ ಸೆಳೆದಿದ್ದ ಡಾ. ಜಾನ್ ಜೋಸೆಫ್ ಚಿನ್ನ ಕಳ್ಳಸಾಗಾಣಿಕೆದಾರರಿಗೆ ಸಿಂಹಸ್ವಪ್ನವಾಗಿದ್ದರು. ಮಲ್ ಬಾರ್ ನಲ್ಲಿ ಚಿನ್ನ ಕಳ್ಳಸಾಗಾಣಿಕೆಯ ಹಲವು ಪ್ರಕರಣಗಳನ್ನು ಬಯಲಿಗೆಳೆಯುವಲ್ಲಿ ಡಾ. ಜಾನ್ ಜೋಸೆಫ್ ಪ್ರಮುಖ ಪಾತ್ರವಹಿಸಿದ್ದರು.
ವಿತ್ತ ಸಚಿವಾಲಯದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದ ಡಾ.ಜಾನ್ ಜೋಸೆಫ್ ಅವರು ದಿಲ್ಲಿಯಲ್ಲಿ ಅಬಕಾರಿ ಮತ್ತು ಕಸ್ಟಮ್ಸ್ ಕೇಂದ್ರ ಮಂಡಳಿಯ ವಿಶೇಷ ಕಾರ್ಯದರ್ಶಿ ಬಜೆಟ್ ಮತ್ತು ತನಿಖಾ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ.ಜಾನ್ ಜೋಸೆಫ್ ಮತ್ತು ಡಾ.ಮೇರಿ ಅಬ್ರಹಾಂ ದಂಪತಿಗೆ ಐಪಿಎಸ್ ಅಧಿಕಾರಿ ಚೈತ್ರಾ ಸೇರಿದಂತೆ ಇಬ್ಬರು ಮಕ್ಕಳು. ಚೈತ್ರಾ ಸಹೋದರ ತ್ರಿಶೂರ್ ಮೆಡಿಕಲ್ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾರೆ.
ಚೈತ್ರಾ ಕೋಝಿಕ್ಕೋಡ್ ನ ಕೇಂದ್ರಿಯ ವಿದ್ಯಾಲಯದಲ್ಲಿ ಶಿಕ್ಷಣ ಪಡೆದವರು. 2016ರ ಬ್ಯಾಚ್ ನ ಐಪಿಎಸ್ ಅಧಿಕಾರಿ. 2016ರಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 111ನೇ ರ್ಯಾಂಕ್ ನೊಂದಿಗೆ ಐಪಿಎಸ್ ತೇರ್ಗಡೆಯಾಗಿದ್ದರು. ತಲಶ್ಶೇರಿಯಲ್ಲಿ ಎಎಸ್ಪಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಕಾನೂನು ಮತ್ತು ಸುವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸಿದ ಅತ್ಯುತ್ತಮ ದಾಖಲೆ ಇವರ ಹೆಸರಿನಲ್ಲಿದೆ. ಇದೀಗ ತಿರುವನಂತಪುರದಲ್ಲಿ ಮಹಿಳಾ ಪೊಲೀಸ್ ಘಟಕದ ಅಧೀಕ್ಷಕಿಯಾಗಿರುವ (ಎಸ್ಪಿ) ಚೈತ್ರಾರಿಗೆ ಡಿಸಿಪಿ(ಕಾನೂನು ಮತ್ತು ಸುವ್ಯವಸ್ಥೆ) ಡಿಸಿಪಿ ಆರ್ ಆದಿತ್ಯ ಅನುಪಸ್ಥಿತಿಯಲ್ಲಿ ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು.