ಕುಂಭಮೇಳದಲ್ಲಿ ಪವಿತ್ರ ಸ್ನಾನ ಹಾನಿಕಾರಕ: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ
ಹೊಸದಿಲ್ಲಿ, ಜ. 27: ಕುಂಭಮೇಳದ ಸಂದರ್ಭ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಹಾನಿಕಾರಕ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚರಿಕೆ ನೀಡಿದೆ. ಪ್ರಸಕ್ತ ಸಂದರ್ಭ ಅಲಹಾಬಾದ್ನಲ್ಲಿ ಗಂಗಾ ನದಿ ನೀರು ಕುಡಿಯಲು ಹಾಗೂ ಸ್ನಾನ ಮಾಡಲು ಯೋಗ್ಯವಲ್ಲ ಎಂದು ಕೇಂದ್ರ ಸರಕಾರದ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.
ಉತ್ತರಾಖಂಡ, ಉತ್ತರಪ್ರದೇಶ, ಬಿಹಾರ್, ಜಾರ್ಖಂಡ್ ಹಾಗೂ ಪಶ್ಚಿಮಬಂಗಾಳದ ವಿವಿಧ ಪ್ರದೇಶಗಳಲ್ಲಿ ಗಂಗಾ ನದಿ ನೀರಿನ ಪ್ರಸಕ್ತ ಗುಣಮಟ್ಟದ ಬಗ್ಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನಿಗಾ ಇರಿಸಿದೆ. ಮಂಡಳಿಯ ಮಾನದಂಡದ ಪ್ರಕಾರ ಬಯೋಕೆಮಿಕಲ್ ಆಕ್ಸಿಜನ್, ಡಿಸೋಲ್ವಡ್ ಆಕ್ಸಿಜನ್ ಹಾಗೂ ಆಮ್ಲೀಯತೆಯನ್ನು ಅವಲಂಬಿಸಿ ನೀರು ಕುಡಿಯುಲು ಹಾಗೂ ಸ್ನಾನ ಮಾಡಲು ಯೋಗ್ಯವೇ ಎಂದು ನಿರ್ಧರಿಸಲಾಗುತ್ತದೆ.
ಅಲಹಾಬಾದ್ನ ದತ್ತಾಂಶ ನೀರಿನಲ್ಲಿ ಬಯೋಕೆಮಿಕಲ್ ಆಕ್ಸಿಜನ್ ಕೆಂಪು ವರ್ಗದಲ್ಲಿ ಇದೆ. ಇದು ಪ್ರತಿ ಲೀಟರ್ ನೀರಿನಲ್ಲಿ ಅನುಮತಿಸಬಹುದಾದ ಮಿತಿಗಿಂತ ಪ್ರತಿ ಲೀಟರ್ನಲ್ಲಿ 10 ಮಿಲ್ಲಿ ಗ್ರಾಂಗಿಂತಲೂ ಹೆಚ್ಚಿದೆ. ಬಯೋಕೆಮಿಕಲ್ ಆಕ್ಸಿಜನ್ ಪ್ರತಿ ಲೀಟರ್ನಲ್ಲಿ 3 ಮಿಲ್ಲಿ ಗ್ರಾಂಗಿಂತ ಕಡಿಮೆ ಇರುವ ನೀರು ಮಾತ್ರ ಕುಡಿಯಲು ಹಾಗೂ ಸ್ನಾನ ಮಾಡಲು ಯೋಗ್ಯ. ಅಲಬಾಬಾದ್ನಲ್ಲಿ ಕುಂಭಮೇಳ ಮಾರ್ಚ್ 5ರ ವರೆಗೆ ನಡೆಯಲಿದೆ. ಇಲ್ಲಿಗೆ ಹಲವು ಅತಿ ಜನಪ್ರಿಯ ವ್ಯಕ್ತಿಗಳು, ರಾಜಕೀಯ ನಾಯಕರು ಹಾಗೂ ವಿದೇಶಿ ಪ್ರತಿನಿಧಿಗಳು ಸಹಿತ ಸುಮಾರು 12 ಕೋಟಿ ಜನರು ಭೇಟಿ ನೀಡುವ ಸಾಧ್ಯತೆ ಇದೆ. ಇಲ್ಲಿಗೆ ಆಗಮಿಸುವ ಹೆಚ್ಚಿನ ಜನರು ಗಂಗಾ, ಯುಮನಾ ಹಾಗೂ ಪೌರಾಣಿಕ ನದಿಯಾದ ಸರಸ್ವತಿಯ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ.