ಟ್ರಂಪ್ ಗಾಲ್ಫ್ ಕ್ಲಬ್ನಲ್ಲಿ ಕೆಲಸ ಮಾಡುತ್ತಿದ್ದ 12 ವಲಸಿಗರ ಉಚ್ಚಾಟನೆ
ನ್ಯೂಯಾರ್ಕ್, ಜ. 27: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ನ್ಯೂಯಾರ್ಕ್ನಲ್ಲಿರುವ ಗಾಲ್ಫ್ ಕ್ಲಬ್ಗಳ ಪೈಕಿ ಒಂದರಲ್ಲಿ ಕೆಲಸ ಮಾಡುತ್ತಿದ್ದ 12 ವಲಸಿಗ ಸಿಬ್ಬಂದಿಯನ್ನು ಈ ತಿಂಗಳು ಉಚ್ಚಾಟಿಸಲಾಗಿದೆ ಎಂದು ಅವರ ವಕೀಲ ಹೇಳಿದ್ದಾರೆ.
ಅವರು ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದರೂ, ಅವರ ಕಾನೂನು ಸ್ಥಾನಮಾನದ ಬಗ್ಗೆ ಕ್ಲಬ್ ನ ನಿರ್ವಾಹಕರಿಗೆ ವರ್ಷಗಳ ಮೊದಲೇ ತಿಳಿದಿತ್ತು ಎಂದು ಅವರು ಹೇಳಿದ್ದಾರೆ.
ಮೆಕ್ಸಿಕೊ ಗಡಿಯುದ್ದಕ್ಕೂ ಗೋಡೆ ಕಟ್ಟುವ ತನ್ನ ಬೇಡಿಕೆಗೆ ಸಂಸತ್ತು ಕಾಂಗ್ರೆಸ್ ಅನುಮೋದನೆ ನೀಡದ ಹಿನ್ನೆಲೆಯಲ್ಲಿ ಟ್ರಂಪ್, ಸರಕಾರವನ್ನು ಸ್ಥಗಿತಗೊಳಿಸಿದ್ದರು. ಈ ಅವಧಿಯಲ್ಲಿ ಅವರು ಭಾರೀ ಟೀಕೆಗೆ ಒಳಗಾಗಿದ್ದರು.
ಈ ಅವಧಿಯಲ್ಲಿ, ವೆಸ್ಟ್ ಚೆಸ್ಟರ್ ಕೌಂಟಿಯಲ್ಲಿರುವ ಟ್ರಂಪ್ ನ್ಯಾಶನಲ್ ಗಾಲ್ಫ್ ಕ್ಲಬ್ನ ಮ್ಯಾನೇಜರೊಬ್ಬರು, ಜನವರಿ 18ರಂದು 12 ವಲಸಿಗ ನೌಕರರನ್ನು ಒಬ್ಬರ ನಂತರ ಒಬ್ಬರಂತೆ ಕರೆದು ಕೆಲಸದಿಂದ ವಜಾಗೊಳಿಸಿದರು ಎಂದು ವಕೀಲ ಅನಿಬಲ್ ರೊಮೇರೊ ಶನಿವಾರ ತಿಳಿಸಿದರು.
ಅವರ ಪೈಕಿ ಹೆಚ್ಚಿನವರು ಈ ಕ್ಲಬ್ನಲ್ಲಿ 12 ಅಥವಾ ಅದಕ್ಕೂ ಹೆಚ್ಚು ವರ್ಷಗಳ ಕಾಲ ಕೆಲಸ ಮಾಡಿದ್ದರು ಎಂದರು.
‘‘ಇದು ವಂಚನೆ. ಅಲ್ಲಿ ಅವರು 12, 13, 14 ವರ್ಷಗಳ ಕಾಲ ಕೆಲಸ ಮಾಡುತ್ತಿದ್ದರು’’ ಎಂದು ರೊಮೇರೊ ನುಡಿದರು.