ಬೆಳೆ ಸಾಲ ಯೋಜನೆ, ಜಾತಿ ವಿಭಜನೆ: ಮೋದಿಗೆ ಕೇಜ್ರಿವಾಲ್ ತರಾಟೆ
ಜಿಂದ್, ಜ. 28: ರೈತ ಸಮುದಾಯಕ್ಕೆ ಸೌಲಭ್ಯ ನೀಡುವ ಉದ್ದೇಶ ಹೊಂದಿದ್ದ ಬೆಳೆ ವಿಮೆ ಯೋಜನೆ ವಿಫಲವಾಗಿರುವುದಕ್ಕೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಆಪ್ನ ರಾಷ್ಟ್ರೀಯ ಸಂಚಾಲಕ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಎನ್ಡಿಎ ಸರಕಾರ ಸಮಾಜವನ್ನು ಜಾತಿ ನೆಲೆಯಲ್ಲಿ ವಿಭಜಿಸುತ್ತಿದೆ ಎಂದು ಆರೋಪಿಸಿದ್ದಾರೆ.
ನೈಸರ್ಗಿಕ ವಿಕೋಪದಿಂದ ಬೆಳೆ ನಷ್ಟದ ಸಂದರ್ಭ ರೈತರಿಗೆ ನೆರವು ನೀಡುವ ಉದ್ದೇಶವನ್ನು ಪ್ರಧಾನ ಮಂತ್ರಿ ಫಸಲ್ ಯೋಜನೆ ಹೊಂದಿದೆ. 2014ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಬೆಳೆ ವಿಮಾ ಯೋಜನೆಯ ಭರವಸೆ ನೀಡಿದ್ದರು. ಆದರೆ, ಈಗ ರೈತರ ಬೆಳೆ ನಾಶವಾದರೆ ವಿಮಾ ಸಂಸ್ಥೆಗಳು ವಿಮೆ ನೀಡಲು ನಿರಾಕರಿಸುತ್ತಿವೆ. ಶೇ. 70 ಬೆಳೆ ಹಾನಿ ಆದರೆ ಮಾತ್ರ ವಿಮೆ ನೀಡಲಾಗುವುದು ಎಂದು ಅವು ಹೇಳುತ್ತಿವೆ ಎಂದು ಇಲ್ಲಿನ ಜಿಂದ್ ವಿಧಾನ ಸಭೆ ಉಪ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ ಹೇಳಿದರು. ಜಿಂದ್ ಕ್ಷೇತ್ರದ ಉಪ ಚುನಾವಣೆ ಜನವರಿ 28ರಂದು ನಡೆಯಲಿದೆ. ಐಎನ್ಎಲ್ಡಿ ಎಂಎಲ್ಎ ಹರಿ ಚಂದ್ ಮಿದ್ದಾ ನಿಧನರಾದ ಹಿನ್ನೆಲೆಯಲ್ಲಿ ಈ ಸ್ಥಾನ ಖಾಲಿ ಬಿದ್ದಿತ್ತು.