ಐಸಿಐಸಿಐ ಪ್ರಕರಣ: ಸಿಬಿಐ ಅಧಿಕಾರಿ ವಿರುದ್ಧ ತನಿಖೆ ವಿಳಂಬ, ಮಾಹಿತಿ ಸೋರಿಕೆ ಆರೋಪ
ಹೊಸದಿಲ್ಲಿ, ಜ. 28: ಐಸಿಐಸಿಐ ಬ್ಯಾಂಕ್ ಮುಖ್ಯಸ್ಥೆಯಾಗಿದ್ದ ಚಂದಾ ಕೊಚಾರ್ ವಿರುದ್ಧ ಎಫ್ಐಆರ್ ದಾಖಲಿಸಿದ ಬೆನ್ನಲ್ಲೇ ಸಿಬಿಐ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಅಧಿಕಾರಿ ವಿರುದ್ಧ ತನಿಖೆ ವಿಳಂಬ ಮತ್ತು ಮಾಹಿತಿ ಸೋರಿಕೆ ಆರೋಪ ಕೇಳಿಬಂದಿದೆ.
ಸಿಬಿಐ ಎಸ್ಪಿ ಸುಧಾಂಶು ಧರ್ ಮಿಶ್ರಾ ಕಳೆದ ವಾರ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಮಾಹಿತಿ ಸೋರಿಕೆ ಮಾಡಿದ್ದಾರೆ ಹಾಗೂ ಅನಗತ್ಯವಾಗಿ ತನಿಖೆ ವಿಳಂಬಿಸಿದ್ದಾರೆ ಎಂಬ ಆರೋಪದ ಬಗ್ಗೆ ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸಲಾಗಿದೆ ಎಂದು ಸಿಬಿಐ ಮೂಲಗಳು ಹೇಳಿವೆ.
ಚಂದಾ ಕೊಚಾರ್, ಅವರ ಪತಿ ದೀಪಕ್ ಕೊಚಾರ್, ವೀಡಿಯೊಕೋನ್ ಎಂಡಿ ವೇಣುಗೋಪಾಲ್ ದೂತ್ ವಿರುದ್ಧ ಜನವರಿ 22ರಂದು ಎಫ್ಐಆರ್ ದಾಖಲಾದ ಬೆನ್ನಲ್ಲೇ ಮಿಶ್ರಾ ಅವರನ್ನು ವರ್ಗಾಯಿಸಲಾಗಿತ್ತು. ಆದರೆ ಇದು ಮಾಮೂಲಿ ಆಡಳಿತಾತ್ಮಕ ಕ್ರಮವಾಗಿಲ್ಲ ಎಂದು ಮೂಲಗಳು ಬಹಿರಂಗಪಡಿಸಿವೆ.
ಉನ್ನತ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ ಬಗ್ಗೆ ಹಣಕಾಸು ಸಚಿವ ಅರುಣ್ಜೇಟ್ಲೆ ಬ್ಲಾಗ್ನಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದರು ಎನ್ನುವುದು ಗಮನಾರ್ಹ. ಇದನ್ನು ಜೇಟ್ಲಿ, "ತನಿಖಾತ್ಮಕ ಸಾಹಸ" ಎಂದು ಬಣ್ಣಿಸಿ, ತನಿಖಾ ಏಜೆನ್ಸಿ ಮುಖ್ಯ ಗುರಿಯ ಮೇಲೆ ಕಣ್ಣಿಡಬೇಕು ಎಂದು ಸಲಹೆ ಮಾಡಿದ್ದರು.
ಜೇಟ್ಲಿಯವರ ಅಭಿಪ್ರಾಯಗಳು ಸಿಬಿಐ ನಾಯಕತ್ವವನ್ನು ಉದ್ದೇಶಿಸಿದ್ದಾಗಿದ್ದು, ತನಿಖೆ ನಡೆಸುವ ಕೆಳಹಂತದ ಅಧಿಕಾರಿಗಳ ಬಗ್ಗೆ ಆಗಿರಲಿಲ್ಲ. ಪ್ರಮುಖ ಪ್ರಕರಣಗಳಲ್ಲಿ ಎಫ್ಐಆರ್ ದಾಖಲಿಸುವುದನ್ನು ಸಿಬಿಐ ನಿರ್ದೇಶಕರು ನಿರ್ಧರಿಸುತ್ತಾರೆ. ಸಿಬಿಐ ಹಂಗಾಮಿ ನಿರ್ದೇಶಕ ಎಂ.ನಾಗೇಶ್ವರ ರಾವ್ ಸೇರಿದಂತೆ ಹಿರಿಯ ಅಧಿಕಾರಿಗಳ ಒಪ್ಪಿಗೆ ಇಲ್ಲದೇ ಹಿರಿಯ ಬ್ಯಾಂಕರ್ಗಳ ವಿರುದ್ಧ ಪ್ರಕರಣ ದಾಖಲಿಸಿರುವ ಸಾಧ್ಯತೆಗಳಿಲ್ಲ ಎನ್ನಲಾಗಿದೆ.