ಡಿಎಚ್ಎಫ್ಎಲ್ ನಿಂದ 31,000 ಕೋಟಿ ಅವ್ಯವಹಾರ: ಕೋಬ್ರಾ ಪೋಸ್ಟ್
ಕರ್ನಾಟಕ ಹಾಗೂ ಗುಜರಾತ್ ಚುನಾವಣೆಗೆ ಲಿಂಕ್ ?
ಹೊಸದಿಲ್ಲಿ,ಜ.29: ದೀವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೋರೇಶನ್ (DHFL) ಸಂಸ್ಥೆಯು 31 ಸಾವಿರ ಕೋಟಿ ರೂ. ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿದೆ ಎಂದು ಮಂಗಳವಾರ 'ಕೋಬ್ರಾ ಪೋಸ್ಟ್' ಸುದ್ಧಿ ತಾಣ ಪತ್ರಿಕಾಗೋಷ್ಟಿಯಲ್ಲಿ ಆರೋಪ ಮಾಡಿದೆ.
ಕಪ್ಪು ಹಣವನ್ನು ಚಲಾವಣೆಮಾಡಲು ಸ್ಥಾಪಿಸಲಾಗುವ ಶೆಲ್ ಕಂಪೆನಿಗಳಿಗೆ ಸಾಲ ಹಾಗೂ ಬಂಡವಾಳದ ಮೂಲಕ ಈ ಬೃಹತ್ ಮೊತ್ತದ ಅವ್ಯವಹಾರ ನಡೆದಿದೆ ಎಂದು ಕೋಬ್ರಾ ಪೋಸ್ಟ್ ವರದಿ ಮಾಡಿದೆ. ಇದು ದೇಶದ ಈವರೆಗಿನ ಅತ್ಯಂತ ದೊಡ್ಡ ಆರ್ಥಿಕ ಹಗರಣ ಎಂದು ಕೋಬ್ರಾ ಪೋಸ್ಟ್ ಹೇಳಿದೆ.
ಕೋಬ್ರಾ ಪೋಸ್ಟ್ ಸಂಪಾದರ ಅನಿರುದ್ಧ ಬಹಲ್ ಜೊತೆ ಮಾಜಿ ವಿತ್ತ ಸಚಿವ ಯಶವಂತ ಸಿನ್ಹ ಹಾಗೂ ಹಿರಿಯ ಪತ್ರಕರ್ತ ಪ್ರೇಮ್ ಶಂಕರ್ ಜಾ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ಗುಜರಾತ್ ಹಾಗೂ ಕರ್ನಾಟಕ ನಂಟು ?
ಕೋಬ್ರಾ ಪೋಸ್ಟ್ ಪ್ರಕಾರ ಡಿಎಚ್ಎಫ್ಎಲ್ ಕರ್ನಾಟಕ ಹಾಗೂ ಗುಜರಾತ್ ರಾಜ್ಯಗಳಲ್ಲಿ ಚುನಾವಣೆ ನಡೆಯುವ ಸಂದರ್ಭದಲ್ಲಿ ಈ ಎರಡು ರಾಜ್ಯಗಳ ಕಂಪೆನಿಗಳಿಗೆ ದೊಡ್ಡ ಮೊತ್ತದ ಸಾಲ ನೀಡಿದೆ. ಆದರೆ ಈ ಕಂಪೆನಿಗಳು ಯಾವುದೇ ಯೋಜನೆಗಳನ್ನು ಅನುಷ್ಠಾನ ಮಾಡಿಲ್ಲ.
ಭದ್ರತೆಯುಳ್ಳ ಮತ್ತು ಭದ್ರತೆಯಿರದ ಈ ಸಾಲಗಳನ್ನು ಶೇರುಗಳನ್ನು ಮತ್ತು ಭಾರತ,ಬ್ರಿಟನ್,ದುಬೈ,ಶ್ರೀಲಂಕಾ ಮತ್ತು ಮಾರಿಷಸ್ಗಳಲ್ಲಿ ಖಾಸಗಿ ಆಸ್ತಿಗಳನ್ನು ಖರೀದಿಸಲು ಬಳಸಲಾಗಿದೆ ಎಂದು ತನಿಖಾ ವರದಿಯು ಹೇಳಿದೆ.
ಮಂಗಳವಾರ ಹಗರಣವು ಬಹಿರಂಗಗೊಂಡ ಬೆನ್ನಿಗೇ ಶೇರು ಮಾರುಕಟ್ಟೆಯಲ್ಲಿ ಡಿಎಚ್ಎಲ್ಎಫ್ ಶೇರುಗಳು ಕುಸಿತ ಕಂಡಿದ್ದು,ಬಾಂಬೆ ಶೇರು ವಿನಿಮಯ ಕೇಂದ್ರ(ಬಿಎಸ್ಇ)ದಲ್ಲಿ ಶೇ.8.01 ರಷ್ಟು ನಷ್ಟದೊಂದಿಗೆ 170.75ರಲ್ಲಿ ಮುಕ್ತಾಯಗೊಂಡಿವೆ. ದಿನದ ವಹಿವಾಟು ಅಂತ್ಯಗೊಳ್ಳುವ ಕೆಲವೇ ಸಮಯದ ಮೊದಲು ಆರೋಪಗಳನ್ನು ಮಾಡಲಾಗಿರುವುದರಿಂದ ಬುಧವಾರ ಕಂಪನಿಯ ಶೇರುಗಳು ಇನ್ನಷ್ಟು ಕುಸಿಯುವ ನಿರೀಕ್ಷೆಯಿದೆ.
ಕಪಿಲ್ ವಾಧವಾನ್, ಅರುಣಾ ವಾಧವಾನ್ ಮತ್ತು ಧೀರಜ್ ವಾಧವಾನ್ ಕೋಬ್ರಾಪೋಸ್ಟ್ ಹೆಸರಿಸಿರುವ ಪ್ರವರ್ತಕರಾಗಿದ್ದಾರೆ. ಕಂಪನಿಗಳಿಗೆ 200 ಕೋ.ರೂ.ಗೂ ಹೆಚ್ಚಿನ ಸಾಲಗಳಿಗೆ ಮಂಜೂರಿಯನ್ನು ನೀಡುವ ಸಾಲ ಸಮಿತಿಯ ಸದಸ್ಯರಾಗಿ ಕಪಿಲ್ ಮತ್ತು ಧೀರಜ್ ತಮ್ಮ ಅಧಿಕಾರವನ್ನು ದುರುಪಯೋಗಿಸಿಕೊಂಡಿದ್ದಾರೆ ಎಂದು ಅದು ಆರೋಪಿಸಿದೆ.
ಸುದ್ದಿಗಾರರು ಕಪಿಲ್ ವಾಧವಾನ್ಗೆ ಮಾಡಿದ ಕರೆಗಳು ಮತ್ತು ರವಾನಿಸಿದ ಸಂದೇಶಗಳಿಗೆ ಉತ್ತರಗಳು ದೊರಕಿಲ್ಲ. ಆದರೆ ಸಂಜೆಯ ವೇಳೆಗೆ ಎಲ್ಲ ಆರೋಪಗಳನ್ನು ನಿರಾಕರಿಸಿ ಡಿಎಚ್ಎಫ್ಎಲ್ ಹೇಳಿಕೆಯೊಂದನ್ನು ಹೊರಡಿಸಿದೆ.
ಡಿಎಚ್ಎಫ್ಎಲ್ ಸಮರ್ಥ ಕಾರ್ಪೊರೇಟ್ ಆಡಳಿತವನ್ನು ಹೊಂದಿದ್ದು,ಪ್ರಮುಖ ಕ್ರೆಡಿಟ್ ಏಜೆನ್ಸಿಗಳಿಂದ ಎಎಎ ಕ್ರೆಡಿಟ್ ರೇಟಿಂಗ್ನ್ನು ಪಡೆದಿದೆ. ಕಂಪನಿಯು ತೆರಿಗೆ ನಿಯಮಗಳಿಗೆ ಪೂರ್ಣ ವಿಧೇಯವಾಗಿದ್ದು,ಅದರ ಲೆಕ್ಕ ಪುಸ್ತಕಗಳನ್ನು ಜಾಗತಿಕ ಆಡಿಟರ್ ಗಳು ಪರಿಶೋಧಿಸುತ್ತಾರೆ ಎಂದು ಹೇಳಿಕೆಯು ತಿಳಿಸಿದೆ.
ಕಂಪನಿಯು ಉದ್ಯಮದಲ್ಲಿನ ಎಲ್ಲ ಅತ್ಯುತ್ತಮ ಪರಿಪಾಠಗಳಿಗೆ ಅನುಗುಣವಾಗಿ ಮತ್ತು ಎಲ್ಲ ನಿಯಮಗಳನ್ನು ಪಾಲಿಸುವ ಮೂಲಕ ಸಾಲಗಳನ್ನು ವಿತರಿಸುತ್ತಿದೆ ಎಂದು ತಿಳಿಸಿರುವ ಹೇಳಿಕೆಯು,ಡಿಎಚ್ಎಫ್ಎಲ್ ಮತ್ತು ಅದರ ಸಮೂಹ ಕಂಪನಿಗಳು ತಮ್ಮ ಕಾರ್ಯಾಚರಣೆಗಳ ಯಾವುದೇ ಪರಿಶೀಲನೆಯನ್ನು ಎದುರಿಸುವ ವಿಶ್ವಾಸವನ್ನು ಹೊಂದಿವೆ ಮತ್ತು ಈ ಕ್ಷುಲ್ಲಕ ಆರೋಪಗಳಿಗೆ ತಾರ್ಕಿಕ ಅಂತ್ಯವನ್ನು ಕಾಣಿಸಲಿವೆ ಎಂದು ಹೇಳಿದೆ.
ಡಿಎಚ್ಎಲ್ಎಫ್ ಪ್ರವರ್ತಕರು ಹಾಲಿ ಕಾನೂನುಗಳನ್ನು ಉಲ್ಲಂಘಿಸಿ ಆಡಳಿತಾರೂಢ ಬಿಜೆಪಿಗೆ ಭಾರೀ ದೇಣಿಗೆಗಳನ್ನು ನೀಡಿದ್ದಾರೆ ಎಂದೂ ಕೋಬ್ರಾಪೋಸ್ಟ್ ಆರೋಪಿಸಿದೆ.
ವಂಚನೆಯ ಕಾರ್ಯತಂತ್ರ
ಪ್ರವರ್ತಕರು ಒಂದು ಲಕ್ಷ ರೂ.ಗಳ ನಾಮಮಾತ್ರ ಬಂಡವಾಳದೊಂದಿಗೆ ಹಲವಾರು ಶೆಲ್ ಅಥವಾ ನಕಲಿ ಕಂಪನಿಗಳನ್ನು ಹುಟ್ಟುಹಾಕಿದ್ದರು. ಈ ಪೈಕಿ ಹೆಚ್ಚಿನ ಕಂಪನಿಗಳು ಒಂದೇ ವಿಳಾಸವನ್ನು ಮತ್ತು ಅದೇ ಆರಂಭಿಕ ನಿರ್ದೇಶಕರನ್ನು ಹೊಂದಿವೆ. ಹಣವನ್ನು ದುರುಪಯೋಗಪಡಿಸಿಕೊಳ್ಳಲು ವಾಧವಾನ್ಗಳು 45 ಕಂಪನಿಗಳನ್ನು ಹುಟ್ಟುಹಾಕಿದ್ದರು ಮತ್ತು ಈ ಪೈಕಿ 34 ಕಂಪನಿಗಳು ಯಾವುದೇ ವ್ಯವಹಾರ ಅಥವಾ ಆದಾಯವನ್ನು ವರದಿ ಮಾಡಿಲ್ಲ ಎಂದೂ ಕೋಬ್ರಾಪೋಸ್ಟ್ ಆರೋಪಿಸಿದೆ.
ಬಳಿಕ ಡಿಎಚ್ಎಲ್ಎಫ್ ಈ ಕಂಪನಿಗಳಿಗೆ ಬೃಹತ್ ಮೊತ್ತದ ಸಾಲಗಳನ್ನು ನೀಡುತ್ತಿದ್ದು,ಈ ಪೈಕಿ ಹೆಚ್ಚಿನ ಸಾಲಗಳು ಯಾವುದೇ ಭದ್ರತೆಯನ್ನು ಹೊಂದಿಲ್ಲ. ಅಲ್ಲದೆ ಸಾಲಗಳನ್ನು ಯೋಜನೆಯ ಹಂತಕ್ಕನುಗುಣವಾಗಿ ನೀಡದೇ ಒಂದೇ ಬಾರಿಗೆ ವಿತರಿಸಲಾಗಿದೆ ಎಂದೂ ಅದು ಹೇಳಿದೆ.
ಪ್ರವರ್ತಕರು ಇನಸೈಡರ್ ಟ್ರೇಡಿಂಗ್ನಲ್ಲಿ ತೊಡಗಿಕೊಂಡಿದ್ದರು ಮತ್ತು ವಿದೇಶಗಳಲ್ಲಿ ಸುಮಾರು 4,000 ಕೋ.ರೂ.ಗಳ ಆಸ್ತಿಗಳನ್ನು ಮಾಡಿದ್ದಾರೆ. ಅಲ್ಲದೆ ಸಾಲಗಳ ಹಣವನ್ನು ಬಳಸಿ ಶ್ರೀಲಂಕಾ ಪ್ರೀಮಿಯರ್ ಲೀಗ್ನಲ್ಲಿ ಈಗ ನಿಷ್ಕ್ರಿಯವಾಗಿರುವ ವಯಾಂಬಾ ಯುನೈಟೆಡ್ ಕ್ರಿಕೆಟ್ ತಂಡವನ್ನು ಸಹ ಖರೀದಿಸಿದ್ದರು ಎಂದೂ ಕೋಬ್ರಾಪೋಸ್ಟ್ ತನ್ನ ತನಿಖಾ ವರದಿಯಲ್ಲಿ ಹೇಳಿದೆ.
ಕಂಪನಿಗೆ ಇದು ಎರಡನೇ ಹೊಡೆತ
ಐಎಲ್ಆ್ಯಂಡ್ಎಫ್ಎಸ್ ಬಿಕ್ಕಟ್ಟಿನಿಂದಾಗಿ ಈ ಹಿಂದೆ ನಷ್ಟವನ್ನು ಅನುಭವಿಸಿದ್ದ ಡಿಎಚ್ಎಫ್ಎಲ್ ಠೇವಣಿಗಳನ್ನು ಸ್ವೀಕರಿಸುವ ದೇಶದ ಕೆಲವೇ ಗೃಹಸಾಲ ಸಂಸ್ಥೆಗಳಲ್ಲೊಂದಾಗಿದೆ. ಇದರಿಂದಾಗಿ ಅದಕ್ಕೆ ತನ್ನದೇ ಸಂಪನ್ಮೂಲಗಳು ಲಭ್ಯವಾಗಿವೆ. ಇತರ ಕಂಪನಿಗಳು ಗ್ರಾಹಕರಿಗೆ ಗೃಹಸಾಲಗಳನ್ನು ನೀಡಲು ಬ್ಯಾಂಕುಗಳಿಂದ ಸಾಲ ಪಡೆದುಕೊಳ್ಳುತ್ತವೆ.
ಐಎಲ್ಆ್ಯಂಡ್ಎಫ್ಎಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಡಿಎಚ್ಎಫ್ಎಲ್ನ ಶೇರುಗಳು ಕುಸಿತವನ್ನು ಕಂಡಿದ್ದವು. ಈಗ ಕೋಬ್ರಾಪೋಸ್ಟ್ ಇನ್ನೊಂದು ಕುಸಿತಕ್ಕೆ ಕಾರಣವಾಗಿದೆ.