ನಮ್ಮ ಪಾಲಿನ ಕಥನವನ್ನು ಹೇಳುವ ಕಾಲ ಬಂದಿದೆ: ಪ್ರಿಯಾ ರಮಣಿ
ಎಂ.ಜೆ.ಅಕ್ಬರ್ ಮಾನನಷ್ಟ ಪ್ರಕರಣದಲ್ಲಿ ಸಮನ್ಸ್ ಜಾರಿ
ಹೊಸದಿಲ್ಲಿ,ಜ.29: ‘ಮೀ ಟೂ’ ಅಭಿಯಾನದ ಅಂಗವಾಗಿ ತನ್ನ ವಿರುದ್ಧ ಮಾಡಲಾಗಿದ್ದ ಲೈಂಗಿಕ ದುರ್ವರ್ತನೆ ಆರೋಪಗಳನ್ನು ಖಂಡಿಸಿ ಮಾಜಿ ಕೇಂದ್ರ ಸಚಿವ ಎಂ.ಜೆ.ಅಕ್ಬರ್ ಅವರು ಹೂಡಿರುವ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.25ರಂದು ತನ್ನ ಮುಂದೆ ಹಾಜರಾಗುವಂತೆ ದಿಲ್ಲಿಯ ಹೆಚ್ಚುವರಿ ಮಹಾನಗರ ನ್ಯಾಯಾಲಯವು ಪತ್ರಕರ್ತೆ ಪ್ರಿಯಾ ರಮಣಿ ಅವರಿಗೆ ಮಂಗಳವಾರ ಸಮನ್ಸ್ ಹೊರಡಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ರಮಣಿ,‘‘ ನಮ್ಮ ಪಾಲಿನ ಕಥನವನ್ನು ಹೇಳುವ ಕಾಲ ಬಂದಿದೆ’’ ಎಂದು ಟ್ವೀಟಿಸಿದ್ದಾರೆ.
‘ಮೀ ಟೂ’ ಅಭಿಯಾನದ ಅಂಗವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಹೆಸರು ಕಾಣಿಸಿಕೊಂಡ ಬಳಿಕ ಅಕ್ಬರ್ ಕಳೆದ ವರ್ಷದ ಅ.17ರಂದು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ರಮಣಿ ಅಕ್ಬರ್ ಅವರ ಪ್ರತಿಷ್ಠೆಗೆ ಹಾನಿಯನ್ನುಂಟು ಮಾಡಿದ್ದಾರೆ ಎಂದು ಅವರ ಪರ ವಕೀಲರು ಹೇಳಿದರು.
ಅಕ್ಬರ್ ವಿರುದ್ಧ ಲೈಂಗಿಕ ದುರ್ವರ್ತನೆಯ ಆರೋಪ ಹೊರಿಸಿರುವ ಪತ್ರಕರ್ತೆಯರಲ್ಲಿ ರಮಣಿ ಮೊದಲಿಗರಾಗಿದ್ದರು. ಅಕ್ಬರ್ ಸೇರಿದಂತೆ ಏಳು ಸಾಕ್ಷಿಗಳ ಹೇಳಿಕೆಗಳನ್ನು ಪ್ರಕರಣದಲ್ಲಿ ದಾಖಲಿಸಿಕೊಳ್ಳಲಾಗಿದೆ.
ತನ್ನ ವಿರುದ್ಧದ ಎಲ್ಲ ಆರೋಪಗಳನ್ನು ತಿರಸ್ಕರಿಸಿರುವ ರಾಜ್ಯಸಭಾ ಸದಸ್ಯ ಅಕ್ಬರ್, ಇವೆಲ್ಲ ಸುಳ್ಳು, ವೃಥಾ ಮತ್ತು ಆಧಾರವಿಲ್ಲದ ಆರೋಪಗಳಾಗಿವೆ ಎಂದು ಬಣ್ಣಿಸಿದ್ದಾರೆ.