ಕೋಕಾ ಕೋಲಾವನ್ನು ಭಾರತದಿಂದ ಓಡಿಸಿದ್ದ ಜಾರ್ಜ್ ಫೆರ್ನಾಂಡಿಸ್
ಹೊಸದಿಲ್ಲಿ,ಜ.29: ಜಾರ್ಜ್ ಫೆರ್ನಾಂಡಿಸ್ ಕೈಗಾರಿಕಾ ಸಚಿವರಾಗಿದ್ದ ಸಮಯದಲ್ಲಿ ಬಹುರಾಷ್ಟ್ರೀಯ ದೈತ್ಯ ತಂಪು ಪಾನೀಯ ಕಂಪೆನಿ ಕೋಕಾ ಕೋಲಾವನ್ನು ಭಾರತದಿಂದ ಹೊರನಡೆಯುವಂತೆ ಮಾಡಿದ್ದರು. ಜಾರ್ಜ್ ಫೆರ್ನಾಂಡಿಸ್, ತಂಪು ಪಾನೀಯವನ್ನು ತಯಾರಿಸಲು ಕೋಕಾ ಕೋಲಾ ಬಳಸುವ ಫಾರ್ಮುಲಾವನ್ನು ಮೊಟ್ಟಮೊದಲ ಬಾರಿ ಪ್ರಶ್ನಿಸಿದವರಾಗಿದ್ದರು. ಈ ಬಗ್ಗೆ 1977ರ ಸೆಪ್ಟಂಬರ್ 4ರಂದು ನೀಡಿದ ಹೇಳಿಕೆಯಲ್ಲಿ, ಕಂಪೆನಿ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಮುಂದುವರಿಸುವ ಬಗ್ಗೆ ಎರಡನೇ ಯೋಚನೆಯೇ ಇಲ್ಲ ಎಂದು ತಿಳಿಸಿದ್ದರು.
ಬಹುರಾಷ್ಟ್ರೀಯ ಕಂಪೆನಿಗಳ ಬಗ್ಗೆ ನಮ್ಮ ನೀತಿ ಸಮಾನವಾಗಿದೆ. ಭಾರತದಲ್ಲಿ ವ್ಯವಹಾರ ನಡೆಸಬೇಕಾದರೆ ಅವರು ಈ ದೇಶದ ಕಾನೂನನ್ನು ಪಾಲಿಸಬೇಕು ಎಂದು ಜಾರ್ಜ್ ತಿಳಿಸಿದ್ದರು. ತನ್ನ ಭಾರತೀಯ ಕಂಪೆನಿಯ ಶೇರುಗಳ ಶೇ.60ನ್ನು ಮತ್ತು ತಂಪು ಪಾನೀಯದ ಫಾರ್ಮುಲಾವನ್ನು ಭಾರತೀಯ ಶೇರುದಾರರಿಗೆ ವರ್ಗಾಯಿಸುವಂತೆ ಅವರು ಕೋಕಾ ಕೋಲಾಕ್ಕೆ ಸೂಚಿಸಿದ್ದರು.
ಶೇರುಗಳ ವರ್ಗಾವಣೆಗೆ ಕೋಕಾ ಕೋಲಾ ಒಪ್ಪಿದರೂ ಫಾರ್ಮುಲಾ ವರ್ಗಾಯಿಸಲು ನಿರಾಕರಿಸಿತ್ತು. ಫಾರ್ಮುಲಾ ತಮ್ಮ ವ್ಯಾಪಾರದ ರಹಸ್ಯವಾಗಿದೆ ಎಂದು ಅದು ತಿಳಿಸಿತ್ತು. ಸೂಕ್ತ ಸಲಹೆಯನ್ನು ನೀಡಲು ನೇಮಿಸಲ್ಪಟ್ಟ ಹಿರಿಯ ಅಧಿಕಾರಿ, ಕೋಕಾ ಕೋಲಾದಿಂದ ಭಾರತಕ್ಕೆ ಹಲವು ರೀತಿಯಲ್ಲಿ ಲಾಭವಾಗಲಿದೆ ಎಂದು ತಿಳಿಸಿದ್ದರು. ಆದರೆ ಇದನ್ನು ತಳ್ಳಿಹಾಕಿದ ಜಾರ್ಜ್ ಫೆರ್ನಾಂಡಿಸ್ ಕಚೇರಿಯ ಅಧಿಕಾರಿಗಳು, ಭಾರತೀಯ ಆರ್ಥಿಕತೆಯಲ್ಲಿ ಕೋಕಾ ಕೋಲಾದ ಪಾತ್ರ ನಗಣ್ಯವಾಗಿದ್ದು ಅದರ ನಿರ್ಗಮನದಿಂದ ಯಾವುದೇ ವ್ಯತ್ಯಾಸ ಬೀಳುವುದಿಲ್ಲ ಎಂದು ತಿಳಿಸಿದ್ದರು. ಕೋಕಾ ಕೋಲಾ ಬದಲಾಗಿ 77 ಎಂಬ ಹೊಸ ಸ್ವದೇಶಿ ತಂಪು ಪಾನೀಯವನ್ನೂ ಫೆರ್ನಾಂಡಿಸ್ ಮಾರುಕಟ್ಟೆಗೆ ಪರಿಚಯಿಸಿದ್ದರು.