ಜಾಗತಿಕ ಭ್ರಷ್ಟಾಚಾರ ಸೂಚ್ಯಂಕ: ಭಾರತದ ಸ್ಥಾನ ಎಲ್ಲಿದೆ ಗೊತ್ತೇ?
ಬೀಜಿಂಗ್, ಜ.30: ಚೀನಾದ ಅಧ್ಯಕ್ಷ ಕ್ಸಿ ಜಿಂಗ್ ಪಿಂಗ್ ಅವರ ಭ್ರಷ್ಟಾಚಾರ ವಿರೋಧಿ ಅಭಿಯಾನ ಹೆಚ್ಚು ಫಲ ನೀಡಿದಂತಿಲ್ಲ. ಏಕೆಂದರೆ ಜಾಗತಿಕ ಭ್ರಷ್ಟಾಚಾರ ಸೂಚ್ಯಂಕದಲ್ಲಿ ಚೀನಾ 87ನೇ ಸ್ಥಾನಕ್ಕೆ ಕುಸಿದಿದ್ದು, ಭಾರತಕ್ಕಿಂತಲೂ ಕೆಳಗಿದೆ. ಭಾರತ ಜಾಗತಿಕವಾಗಿ 78ನೇ ಸ್ಥಾನದಲ್ಲಿದೆ ಎಂದು ‘ಟ್ರಾನ್ಸ್ ಪರೆನ್ಸಿ ಇಂಟರ್ ನ್ಯಾಷನಲ್’ ವರದಿ ಬಹಿರಂಗಪಡಿಸಿದೆ.
2012ರ ಕೊನೆಗೆ ಅಧಿಕಾರ ಸ್ವೀಕರಿಸಿದ ಕ್ಸಿ, ಎರಡನೇ ಅವಧಿಗೆ ಅಧ್ಯಕ್ಷರಾಗಿ ಮುಂದುವರಿದಿದ್ದು, ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ಮತ್ತು ಸೇನೆಯಲ್ಲಿ ಭ್ರಷ್ಟಾಚಾರವನ್ನು ತಡೆಯುವುದು ತಮ್ಮ ಆಡಳಿತದ ಮುಖ್ಯ ಉದ್ದೇಶ ಎಂದು ಘೋಷಿಸಿದ್ದರು. ಭ್ರಷ್ಟಾಚಾರ ಆರೋಪದಲ್ಲಿ ಹಲವು ಮಂದಿ ಉನ್ನತ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಲಾಗಿತ್ತು.
ಇಷ್ಟಾಗಿಯೂ ಜಾಗತಿಕ ಸೂಚ್ಯಂಕದಲ್ಲಿ ಚೀನಾ ಕಳೆದ ವರ್ಷಕ್ಕೆ ಹೋಲಿಸಿದರೆ 10 ಸ್ಥಾನಗಳ ಕುಸಿತ ಕಂಡು 87ನೇ ಸ್ಥಾನದಲ್ಲಿದೆ ಎಂದು ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಕಳೆದ ಬಾರಿ 81ನೇ ಸ್ಥಾನದಲ್ಲಿದ್ದ ಭಾರತ ಮೂರು ಸ್ಥಾನಗಳ ಏರಿಕೆ ಕಂಡು 78ನೇ ಸ್ಥಾನದಲ್ಲಿದೆ. ಸಿಂಗಾಪುರ ಮೂರು ಸ್ಥಾನಗಳ ಏರಿಕೆ ದಾಖಲಿಸಿ, ಮೂರನೇ ಸ್ಥಾನಕ್ಕೆ ನೆಗೆದಿದೆ. ಡೆನ್ಮಾರ್ಕ್ ಹಾಗೂ ನ್ಯೂಜಿಲೆಂಡ್ ಮೊದಲ ಎರಡು ಸ್ಥಾನಗಳಲ್ಲಿದ್ದು, ಕನಿಷ್ಠ ಭ್ರಷ್ಟಾಚಾರ ಇರುವ ದೇಶಗಳು ಎನಿಸಿಕೊಂಡಿವೆ.
ಅಮೆರಿಕ ಕೂಡಾ ಸೂಚ್ಯಂಕದಲ್ಲಿ ಕುಸಿತ ಕಂಡಿದ್ದು, 16ನೇ ಸ್ಥಾನದಿಂದ 22ನೇ ಸ್ಥಾನಕ್ಕೆ ಇಳಿದಿದೆ. ಈ ಮೂಲಕ ಅಗ್ರ 20ರ ಪಟ್ಟಿಯಲ್ಲಿ ಅಮೆರಿಕ ಸ್ಥಾನ ಕಳೆದುಕೊಂಡಿದೆ ಎಂದು ವರದಿ ಹೇಳಿದೆ.