ಪ್ರಧಾನಿ ಮೋದಿ ಅಹಂ ತಣಿಸಲು 10 ಬಾರಿ ‘ಸರ್’ ಎಂದು ಕರೆದಿದ್ದೆ: ಚಂದ್ರಬಾಬು ನಾಯ್ಡು
ಅಮರಾವತಿ, ಜ.31: ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ರಾಜ್ಯದ ಹಿತರಕ್ಷಣೆಗಾಗಿ, ಮೋದಿ ಅವರ ಅಹಂ ತಣಿಸಲು ನಾನು ಅವರನ್ನು ಹಲವು ಬಾರಿ ‘ಸರ್’ ಎಂದು ಕರೆದಿದ್ದೆ ಎಂದು ಹೇಳಿದ್ದಾರೆ.
ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಲು ಕರೆದಿದ್ದ ಸರ್ವ ಪಕ್ಷ ಸಭೆಯಲ್ಲಿ ಮಾತನಾಡಿದ ತೆಲುಗು ದೇಶಂ ಪಕ್ಷ(ಟಿಡಿಪಿ)ಮುಖ್ಯಸ್ಥ ನಾಯ್ಡು, ‘‘ನಾನು ಈ ಹಿಂದಿನ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ರನ್ನು ಭೇಟಿಯಾದಾಗ ಅವರನ್ನು ಮಿಸ್ಟರ್ ಕ್ಲಿಂಟನ್ ಎಂದು ಕರೆದಿದ್ದೆ. ರಾಜಕೀಯದಲ್ಲಿ ಮೋದಿ ನನಗಿಂತ ಕಿರಿಯರು. ಆದಾಗ್ಯೂ ರಾಜ್ಯಕ್ಕೆ ನ್ಯಾಯ ಒದಗಿಸುತ್ತಾರೆಂಬ ವಿಶ್ವಾಸದಲ್ಲಿ ಹಾಗೂ ಅವರ ಅಹಂನ್ನು ತೃಪ್ತಿಪಡಿಸಲು 10 ಬಾರಿ ಅವರನ್ನು 'ಸರ್' ಎಂದು ಕರೆದಿದ್ದೆ’’ ಎಂದರು.
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದ ನಾಯ್ಡು, ‘‘ಕಳೆದ ಬಾರಿ ಬಿಜೆಪಿಯೊಂದಿಗೆ ಮೈತ್ರಿ ಮಾಡದೇ ಸ್ಪರ್ಧಿಸಿದ್ದರೆ,ಇನ್ನೂ 10 ಕ್ಷೇತ್ರಗಳನ್ನು ಗೆಲ್ಲಬಹುದಿತ್ತು’’ ಎಂದರು.
ಕೇಂದ್ರ ಸರಕಾರವು ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ನಾಯ್ಡು ಕಳೆದ ವರ್ಷ ಬಿಜೆಪಿ ನೇತೃತ್ವದ ಎನ್ಡಿಎ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡಿದ್ದರು. ಪ್ರಧಾನಿ ಮೋದಿ ನ್ಯಾಯ ಒದಗಿಸಿಲ್ಲ ಎಂದು ಗೊತ್ತಾದ ಬಳಿಕ ತಾನು ಈ ಹೆಜ್ಜೆ ಇಟ್ಟಿದ್ದಾಗಿ ನಾಯ್ಡು ಹೇಳಿದ್ದಾರೆ.