ನಾಗೇಶ್ವರ ರಾವ್ ನೇಮಕಾತಿ ಪ್ರಶ್ನಿಸಿ ಸಲ್ಲಿಸಲಾದ ಅಪೀಲಿನ ಮೇಲಿನ ವಿಚಾರಣೆಯಿಂದ ಹಿಂದೆ ಸರಿದ ಮೂರನೇ ನ್ಯಾಯಾಧೀಶ
"ನಾಗೇಶ್ವರ ರಾವ್ ನನ್ನ ತವರು ರಾಜ್ಯದವರು ಹಾಗೂ ನಾನು ಅವರ ಮಗಳ ಮದುವೆಗೆ ಹಾಜರಾಗಿದ್ದೆ''
ನಾಗೇಶ್ವರ ರಾವ್
ಹೊಸದಿಲ್ಲಿ,ಜ.31 : ಎಂ ನಾಗೇಶ್ವರ ರಾವ್ ಅವರನ್ನು ಹಂಗಾಮಿ ಸಿಬಿಐ ನಿರ್ದೇಶಕರನ್ನಾಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅಪೀಲಿನ ಮೇಲಿನ ವಿಚಾರಣೆ ಇಂದು ನಡೆಯಬೇಕಿದ್ದರೂ ಈ ಪ್ರಕರಣದ ವಿಚಾರಣೆಯಿಂದ ಜಸ್ಟಿಸ್ ಎನ್ ವಿ ರಮಣ ಹಿಂದೆ ಸರಿದಿರುವುದರಿಂದ ವಿಚಾರಣೆಯನ್ನು ಮತ್ತೆ ಮುಂದೂಡಲಾಗಿದೆ. ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದ ಮೂರನೇ ನ್ಯಾಯಾಧೀಶರು ಇವರಾಗಿದ್ದಾರೆ. "ನಾಗೇಶ್ವರ ರಾವ್ ನನ್ನ ತವರು ರಾಜ್ಯದವರು ಹಾಗೂ ನಾನು ಅವರ ಮಗಳ ಮದುವೆಗೆ ಹಾಜರಾಗಿದ್ದೆ,'' ಎಂಬ ಕಾರಣವನ್ನೂ ಜಸ್ಟಿಸ್ ರಮಣ ನೀಡಿದ್ದಾರೆ.
ಅರ್ಜಿದಾರ ಸಂಸ್ಥೆಯಾಗಿರುವ ಕಾಮನ್ ಕಾಸ್ ಪರ ವಕೀಲ ದುಷ್ಯಂತ್ ದವೆ ತಮ್ಮ ಕಕ್ಷಿಗಾರರ ಪರವಾಗಿ ಈ ಪ್ರಕರಣದ ಶೀಘ್ರ ವಿಚಾರಣೆಗೆ ಪೀಠವೊಂದನ್ನು ರಚಿಸುವಂತೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರನ್ನು ಕೇಳಿಕೊಳ್ಳುವಂತೆ ಜಸ್ಟಿಸ್ ರಮಣ ಬಳಿ ಕೋರಿದಾಗ "ನಾನು ಹೇಗೆ ಮನವಿ ಮಾಡಲಿ ? ಈ ಕೆಲಸ ನ್ಯಾಯಾಲಯದ ರಿಜಿಸ್ಟ್ರಿ ಮಾಡಬೇಕಿದೆ'', ಎಂದು ಜಸ್ಟಿಸ್ ರಮಣ ಹೇಳಿದರು.
ರಮಣ ಹೊರತಾಗಿ ಜಸ್ಟಿಸ್ ಮೋಹನ್ ಎಂ ಶಾಂತನಗೌಡರ್ ಹಾಗೂ ಜಸ್ಟಿಸ್ ಇಂದಿರಾ ಬ್ಯಾನರ್ಜಿ ಈ ಪೀಠದಲ್ಲಿದ್ದರು ಈ ಹಿಂದೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹಾಗೂ ಇನ್ನೊಬ್ಬ ನ್ಯಾಯಾಧೀಶ ಜಸ್ಟಿಸ್ ಎ ಕೆ ಸಿಕ್ರಿ ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದರು.
ಹೊಸ ಸಿಬಿಐ ನಿರ್ದೇಶಕರನ್ನು ಆಯ್ಕೆ ಮಾಡುವ ಉನ್ನತಾಧಿಕಾರ ಆಯ್ಕೆ ಸಮಿತಿಯಲ್ಲಿ ತಾನಿರುವುದರಿಂದ ಹಿಂದೆ ಸರಿಯುತ್ತಿರುವುದಾಗಿ ಸಿಜೆಐ ಗೊಗೊಯಿ ಹೇಳಿದ್ದರೆ, ಹಿಂದಿನ ಸಿಬಿಐ ನಿರ್ದೇಶಕ ಅಲೋಕ್ ವರ್ಮಾರನ್ನು ಪದಚ್ಯುತಗೊಳಿಸಿದ ಸಮಿತಿಯಲ್ಲಿ ಸಿಕ್ರಿ ಇದ್ದುದರಿಂದ ಅವರು ಕೂಡ ನಂತರ ವಿಚಾರಣೆಯಿಂದ ಹಿಂದೆ ಸರಿದಿದ್ದರು.