ಕೋಲ್ಕತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಸಿಬಿಐ ವಿಚಾರಣೆಗೆ ಹಾಜರಾಗಬೇಕು: ಸುಪ್ರೀಂ
ಬಂಧಿಸದಂತೆ ಸುಪ್ರೀಂ ಸೂಚನೆ: ತೀರ್ಪಿಗೆ ಮಮತಾ ಬ್ಯಾನರ್ಜಿ ಸ್ವಾಗತ
ಹೊಸದಿಲ್ಲಿ, ಫೆ.5: ಕೋಲ್ಕತಾ ನಗರ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಸಿಬಿಐ ವಿಚಾರಣೆಗೆ ಹಾಜರಾಗಬೇಕು. ಆದರೆ, ಅವರನ್ನು ಯಾವುದೇ ಕಾರಣಕ್ಕೂ ಬಂಧಿಸಬಾರದು ಎಂದು ಸುಪ್ರೀಂಕೋರ್ಟ್ನ ತ್ರಿಸದಸ್ಯ ಪೀಠ ಮಹತ್ವದ ಆದೇಶ ನೀಡಿದೆ.
ಸುಪ್ರೀಂಕೋರ್ಟಿನ ಈ ತೀರ್ಪನ್ನು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ವಾಗತಿಸಿದ್ದಾರೆ.
ರಾಜೀವ್ ಕುಮಾರ್ ವಿಚಾರಣೆಗೆ ಕೋಲ್ಕತಾಕ್ಕೆ ರವಿವಾರ ರಾತ್ರಿ ತೆರಳಿದ್ದ ಸಿಬಿಐ ಅಧಿಕಾರಿಗಳ ತಂಡವನ್ನು ಬಂಧಿಸಿದ್ದ ಕೋಲ್ಕತಾ ಪೊಲೀಸರ ಕ್ರಮವನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂಕೋರ್ಟಿನ ಮೆಟ್ಟಿಲೇರಿತ್ತು. ರಾಜೀವ್ ಕುಮಾರ್ಗೆ ವಿಚಾರಣೆಗೆ ಹಾಜರಾಗುವಂತೆ ಆದೇಶಿಸುವಂತೆ ಮೊರೆ ಇಟ್ಟಿತು.
ಇಂದು ಅರ್ಜಿಯ ವಿಚಾರಣೆ ನಡೆಸಿದ ಸಿಜೆ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯಪೀಠ, ರಾಜೀವ್ ಕುಮಾರ್ಗೆ ವಿಚಾರಣೆಗೆ ಹಾಜರಾಗಲು ಏನು ಸಮಸ್ಯೆಯಿದೆ. ಅವರು ಏಕೆ ವಿಚಾರಣೆಗೆ ಹಾಜರಾಗಿಲ್ಲ. ಅವರಿಗೆ ಶಿಲ್ಲಾಂಗ್ನಲ್ಲಿ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಲು ನಾವು ಸೂಚನೆ ನೀಡುತ್ತೇವೆ. ಆದರೆ ಅವರನ್ನು ಪ್ರಕರಣದ ಸಾಕ್ಷಿಯನ್ನಾಗಿ ಪರಿಗಣಿಸಿ ವಿಚಾರಣೆ ನಡೆಸಬೇಕು. ಅವರನ್ನು ಬಂಧಿಸಬಾರದು ಎಂದು ತೀರ್ಪು ನೀಡಿದೆ. ಮುಂದಿನ ವಿಚಾರಣೆಯನ್ನು ಫೆ.20ಕ್ಕೆ ಮುಂದೂಡಿದೆ.
ಸಿಬಿಐ ಪರ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ವಾದ ಮಂಡಿಸಿದರು.