ಯೋಧನ ಹತ್ಯೆಯ ಹಿಂದೆ ಮೂವರು ಸಹಯೋಧರ ಕೈವಾಡ
ಹೊಸದಿಲ್ಲಿ, ಫೆ.6: ಕಳೆದ ಜೂನ್ ನಲ್ಲಿ 44 ರಾಷ್ಟ್ರೀಯ ರೈಫಲ್ ನ ಯೋಧ ಔರಂಗಜೇಬ್ ಎಂಬವರನ್ನು ಉಗ್ರರು ಅಪಹರಿಸಿ ಹತ್ಯೆಗೈದ ಪ್ರಕರಣದಲ್ಲಿ ಮೂವರು ಸಹಯೋಧರ ಕೈವಾಡವಿರುವ ಗುಮಾನಿ ವ್ಯಕ್ತವಾಗಿದೆ.
ಯೋಧ ಔರಂಗಜೇಬ್ ಚಲನವಲನ ಬಗ್ಗೆ ಉಗ್ರರಿಗೆ ಮಾಹಿತಿ ನೀಡಿರುವ ಆರೋಪವನ್ನು ಮೂವರು ಸಹಯೋಧರು ಎದುರಿಸುತ್ತಿದ್ದಾರೆ.
ಯೋಧರಾದ ಪುಲ್ವಾಮಾದ ಅಬಿದ್ ವಾನಿ ಮತ್ತು ತಾಜಾಮುಲ್ ಅಹ್ಮದ್ ಮತ್ತು ಕುಲ್ಗಾಮ್ ನ ಆದಿಲ್ ವಾನಿ ಅವರು ಸಹಯೋಧನ ಹತ್ಯೆಗೆ ಉಗ್ರರಿಗೆ ಸಹಕಾರ ನೀಡಿದ ಆರೋಪವನ್ನು ಎದುರಿಸುತ್ತಿದ್ದಾರೆ ಎಂದು ‘ಇಂಡಿಯನ್ ಎಕ್ಸ್ ಪ್ರೆಸ್ ’ವರದಿ ಮಾಡಿದೆ.
ಹಬ್ಬದ ಹಿನ್ನೆಲೆಯಲ್ಲಿ ಯೋಧ ಔರಂಗಜೇಬ್ ಸೇನಾ ಶಿಬಿರದಿಂದ ಪೂಂಚ್ ನಲ್ಲಿರುವ ತನ್ನ ಮನೆಯ ಕಡೆಗೆ ಖಾಸಗಿ ವಾಹನದಲ್ಲಿ ತೆರಳುತ್ತಿದ್ದಾಗ ಅವರ ವಾಹನವನ್ನು ದಾರಿಮಧ್ಯೆ ಅಡ್ಡಗಟ್ಟಿದ ಉಗ್ರರು, ಬಳಿಕ ಅವರನ್ನು ಅಪಹರಿಸಿ ಗುಂಡಿಟ್ಟು ಕೊಂದಿದ್ದರು. ಔಪುಲ್ವಾಮ ಜಿಲ್ಲೆಯ ಗುಸ್ಸಾವು ಗ್ರಾಮದಲ್ಲಿ ಪತ್ತೆಯಾಗಿತ್ತು. ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಗೆ ಸೇರಿದ ಸಮೀರ್ ಟೈಗರ್ ನ್ನು ಹತ್ಯೆಗೈದ ಮೇಜರ್ ರೋಹಿತ್ ಶುಕ್ಲಾ ತಂಡದಲ್ಲಿ ಔರಂಗಜೇಬ್ ಇದ್ದರು. ಈ ಸಿಟ್ಟಿನಿಂದ ಉಗ್ರರು ಔರಂಗಜೇಬ್ ನ್ನು ಅಪಹರಿಸಿ ಹತ್ಯೆಗೈದಿದ್ದರು ಎನ್ನಲಾಗಿದೆ.
ಔರಂಗಜೇಬ್ ಗೆ ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಮರಣೋತ್ತರ ಸೇನಾ ಪುರಸ್ಕಾರ ಶೌರ್ಯಚಕ್ರ ನೀಡಲಾಗಿತ್ತು.